ಅಡ್ಡಗದ್ದೆಯಲ್ಲಿ ಶೃಂಗೇರಿ ತಾಲೂಕು ಕಸಾಪ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕೆ.ಡಿ.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಹೆಬ್ಬಿಗೆ ಸುಂದರೇಶ್, ಗುರುಮೂರ್ತಿ, ಗೋಳ್ಗೋಡು ಚಂದ್ರಶೇಖರ್, ರಮೇಶ್ ಇತರರಿದ್ದರು. 
ಜಿಲ್ಲೆ

ಕನ್ನಡಕ್ಕಾಗಿ ಕಸಾಪ ಸೃಷ್ಟಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್

ಶೃಂಗೇರಿ: ಮೈಸೂರು ಸಂಸ್ಥಾನವನ್ನು ಮಾದರಿಯನ್ನಾಗಿ ರೂಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು ಎಂದು ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಆಗುಂಬೆ ಗಣೇಶ್ ಹೆಗಡೆ ತಿಳಿಸಿದರು.

ಮಂಗಳವಾರ ಅಡ್ಡಗದ್ದೆ ಸರ್ಕಾರಿ ಶಾಲೆಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ. ಕನ್ನಡ ಸಾಹಿತ್ಯ ಪರಿಷತ್ತನ್ನು 1905ರಲ್ಲಿ ಸ್ಥಾಪಿಸಿ ಕನ್ನಡ ಭಾಷೆ, ನಾಡಿಗೆ ಆದ್ಯತೆ ನೀಡಿದ ಅವರ ಭಾಷಾಭಿಮಾನ ಸರ್ವರಿಗೂ ಮಾದರಿ. ಕಸಾಪ ಇಂದಿಗೂ ಅವರ ಆಶಯಕ್ಕೆ ಬದ್ಧವಾಗಿ ಕನ್ನಡ ಭಾಷೆಯ ಕಂಪನ್ನು ಗ್ರಾಮೀಣ ಪ್ರದೇಶಗಳಿಗೂ ಪಸರಿಸುವಲ್ಲಿ ಯಶಸ್ಸು ಕಂಡಿದೆ ಎಂದರು.

ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಭಾವನಮನ ಸಲ್ಲಿಸಲಾಯಿತು. ಅಡ್ಡಗದ್ದೆ ಗ್ರಾಪಂ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಜಮಾ-ಖರ್ಚಿನ ವಿವರವನ್ನು ಮಂಡಿಸಲಾಯಿತು. ಸಮ್ಮೇಳನದ ಯಶಸ್ವಿಗೆ ಕಾರಣಕರ್ತರಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ, ಗೌರವ ಕಾರ್ಯದರ್ಶಿ ರಮೇಶ್ ಶೂನ್ಯ, ಸಂಘಟನಾ ಕಾರ್ಯದರ್ಶಿ ಆನಂದಸ್ವಾಮಿ, ಅಡ್ಡಗದ್ದೆ ಗ್ರಾಪಂ ಕಸಾಪ ಘಟಕದ ಅಧ್ಯಕ್ಷ ಅಣ್ಣುಕುಡಿಗೆ ಶ್ರೀಧರ್ ರಾವ್ ಇದ್ದರು.