ಜಿಲ್ಲೆ

ಕನ್ನಡ ಹೋರಾಟಗಾರರ ಸ್ಮರಣೆ ಅಗತ್ಯ

ಲಲಾಟಾಕ್ಷ ಎಸ್

ಎಚ್.ಡಿ.ಕೋಟೆ: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ ಎಂದು ಸರಗೂರು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಪಟ್ಟಣದ ತಾಲೂಕು ವೈದ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ, ಪರಂಪರೆಯಿಂದ ಶ್ರೀಮಂತ ಭಾಷೆಯಾಗಿದೆ. ನಾಡಿನಲ್ಲಿ ಅನೇಕ ರಾಜ ಮಹಾರಾಜರು, ಕವಿಗಳು, ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕನ್ನಡ ಬೆಳೆಯಬೇಕಾದರೆ ನಮ್ಮಲ್ಲಿ ಬದ್ಧತೆ ಇದ್ದಲ್ಲಿ ಮಾತ್ರ ಸಾಧ್ಯ. ಕರ್ನಾಟಕ ಸ್ಥಾಪನೆಯಲ್ಲಿ ಹಲವು ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟವಿದ್ದು ಅವರನ್ನು ಸ್ಮರಿಸಬೇಕು ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ. ಸಮ್ಮೇಳನ ಅಧ್ಯಕ್ಷರಾಗಿರುವ ವೈ.ಡಿ.ರಾಜಣ್ಣ ಅವರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹತ್ತಕ್ಕೂ ಹೆಚ್ಚು ಸಮ್ಮೇಳನಗಳನ್ನು ವಿವಿಧ ತಾಲೂಕುಗಳಲ್ಲಿ ಆಯೋಜಿಸಿದ್ದರು. ಅವರ ಕನ್ನಡದ ಸೇವೆ ಪರಿಗಣಿಸಿ ಇಂದು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಸರಗೂರು ತಾಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವುದು ಸಂತಸದ ವಿಚಾರ. ಸಮ್ಮೇಳನದ ಯಶಸ್ಸಿಗೆ ತಾಲೂಕು ಆಡಳಿತ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ.ರವಿಕುಮಾರ್, ಡಾ.ಸೋಮಣ್ಣ, ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಮಹದೇವು, ಪ್ರಕಾಶ್, ಸಿ.ಎನ್.ನಾಗಣ್ಣ, ವನಸಿರಿ ಶಂಕರ್, ಪ್ರಕಾಶ್, ಚಂದ್ರಮೌಳೇಶ್ವರ, ಶ್ರೀಕಾಂತ್, ಶಿವಯ್ಯ, ಶಿವಪ್ಪ, ಬಹದ್ದೂರ್ ಸತೀಶ್, ಶಿವಕುಮಾರ್, ರಾಜು, ದಾಸೇಗೌಡ, ಅಕ್ಬರ್ ಪಾಷ, ಶಿವರಾಜಪ್ಪ, ದಯಾನಂದ್ ಇದ್ದರು.