ಜಿಲ್ಲೆ

ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕವಿಗಳ ಕೊಡುಗೆ ದೊಡ್ಡದು

 ನಾಪೋಕ್ಲು : ಕನ್ನಡ ನಾಡಿನ ಸಾಹಿತ್ಯ ಮತ್ತು ಚರಿತ್ರೆಯನ್ನು ಎಲ್ಲರೂ ತಿಳಿಯಬೇಕು ಎಂದು ಅತಿಥಿ ಶಿಕ್ಷಕಿ ಕೆ.ಡಿ. ಶೋಭಿತಾ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ, ತಾಲೂಕು ಮತ್ತು ನಾಪೋಕ್ಲು ಹೋಬಳಿ ಘಟಕಗಳುಇಲ್ಲಿನ ಎಕ್ಸೆಲ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕದತ್ತಿ ಮತ್ತು ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯದ ಪ್ರಾಚೀನತೆ ಕ್ರಿ.ಶ. 8 ನೇ ಶತಮಾನಕ್ಕೂ ಮೊದಲೇ ಇದ್ದ ಬಗ್ಗೆ ಸಾಹಿತ್ಯಕ ಸಾಕ್ಷಿಗಳು ಅಸ್ಪಷ್ಟತೆಯಲ್ಲಿ ಮುಚ್ಚಿಹೋಗಿದೆ. ಕೆಲವೇ ಶಾಸನ ಪುರಾವೆಗಳು ಲಭ್ಯವಿದ್ದು, ಇತಿಹಾಸದ ಪ್ರಾರಂಭಿಕ ಹಂತಗಳಿಗೆ ಸೇರಿದ ಬಹುತೇಕ ಶಾಸನಗಳನ್ನು ಬ್ರಾಹ್ಮಿ ಲಿಪಿ ಹಾಗು ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ. ಅವುಗಳಲ್ಲಿ ಬಹುಪಾಲು ವೀರರಿಗೆ ಗೌರವ ಸಲ್ಲಿಸುವ ಕಿರು ದಾಖಲೆಗಳಾಗಿವೆ ಎಂದರು.

ಹಲ್ಮಿಡಿ ಶಾಸನ ,ಪ್ರಾರಂಭಿಕ ಸಾಹಿತ್ಯ ಕೃತಿಗಳು, ವಿರೋಚಿತ ಹಾಗೂ ಮಹಾಕಾವ್ಯದ ಯುಗ, ಧಾರ್ಮಿಕ ಪ್ರಚಾರದ ಯುಗ, ಪ್ರತಿಭಟನಾ ಯುಗ, ವೈಭವದ ಯುಗ ,ಪುನರುಜ್ಜೀವನದ ಯುಗ, ಹಳೆಯ ಹಾಗೂ ನಡು ಗನ್ನಡ ಸಾಹಿತ್ಯ, ನವೋದಯ, ಮಕ್ಕಳ ಸಾಹಿತ್ಯ ,ಜಾನಪದ ಸಾಹಿತ್ಯ ,ಕನ್ನಡ ಭಾಷಾಭಿವೃದ್ಧಿ ,ನವ್ಯ,

ಬಂಡಾಯ- ಹೀಗೆ ಕನ್ನಡ ಕಾವ್ಯದ ಸುವರ್ಣ ಯುಗಗಳೇ ಇವೆ. ಹಳೆಗನ್ನಡ ಮತ್ತು ಹೊಸಗನ್ನಡದ ಕವಿವರ್ಯರ ಕುರಿತು ವಿದ್ಯಾರ್ಥಿಗಳು ತಿಳಿವಳಿಕೆ ಹೊಂದಿರಬೇಕು ಎಂದು ಶಿಕ್ಷಕಿ ಕೆ.ಡಿ. ಶೋಭಿತಾ ಹೇಳಿದರು.

ಮಕ್ಕಳಿಗೆ ಬಹುಮಾನ ವಿತರಣೆ: ನಿವೃತ್ತ ಶಿಕ್ಷಕ ಸಿ. ಕೆ. ತಿಮ್ಮಯ್ಯ ಅವರು ಕೊಡಗಿನ ಸಾಹಿತಿಗಳು ಹಾಗೂ ವೀರಸೇನಾನಿ ಜನರಲ್ ತಿಮ್ಮಯ್ಯ, ಕಾರ್ಯಪ್ಪ ಅವರ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆ ಗಳ ಮೂಲಕ ರಸಪ್ರಶ್ನೆಯನ್ನು ಕೇಳುತ್ತಾ, ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.