ಚಾಮರಾಜನಗರ: ಕನ್ನಡ ಸಾಹಿತ್ಯಕ್ಕೆ ನಾಟಕಕಾರ ಟಿ.ಪಿ.ಕೈಲಾಸಂ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಟಿ.ಪಿ.ಕೈಲಾಸಂ ಕೊಡುಗೆಗಳ ಕುರಿತ ವಿಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತಿ ಟಿ.ಪಿ.ಕೈಲಾಸಂ ಅವರ ನಾಟಕ ಮತ್ತು ಕವನಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿದೆ. ಅವರ ನಾಟಕಗಳಲ್ಲಿ ವಿಡಂಬನೆ, ಹಾಸ್ಯ ಹಾಗೂ ಮೌಲ್ಯಗಳ ಸಮಗ್ರ ಚಿಂತನೆ ಅಡಗಿದೆ. ಅವರ ಕವನಗಳು ಹಾಗೂ ನಾಟಕಗಳ ರಚನೆ ಕನ್ನಡ ಭಾಷಾ ಪ್ರಯೋಗದ ಹೊಸತನವಾಗಿದೆ ಎಂದು ತಿಳಿಸಿದರು.
ಜಾರ್ಲ್ ಬರ್ನಾಡ್ ಷಾ ನಾಟಕಗಳಿಂದ ಪ್ರಭಾವಿತರಾಗಿ, ಅದೇ ರೀತಿಯ ನಾಟಕ ರಚನೆಯನ್ನು ರಚಿಸಿದರು. ಕೋಳಿಕೆ ರಂಗ ಹಾಡು ರಚಿಸಿ ಇಡೀ ಜಗತ್ತಿಗೆ ಕನ್ನಡ ಸಾಹಿತ್ಯದ ಹೊಸತನವನ್ನು ನೀಡಿ ನಿಬ್ಬೆರಗಾಗುವಂತೆ ಮಾಡಿದ್ದರು. ಕೈಲಾಸಂ ಹಾಸ್ಯ ಭರಿತ ಸಾಹಿತ್ಯ ಮನಸ್ಸಿಗೆ ಮುದ ನೀಡುತ್ತದೆ ಎಂದರು.
ಬರಹಗಾರ ಎಸ್.ಲಕ್ಷ್ಮಿ ನರಸಿಂಹ ಮಾತನಾಡಿ, ಹಾಸ್ಯ, ವಿಡಂಬನೆಯ ಮೂಲಕ ಟಿ.ಪಿ.ಕೈಲಾಸಂ ಅವರು ಹಲವಾರು ಕೃತಿಗಳನ್ನು ರಚಿಸುವ ಮೂಲಕ ರಂಗಭೂಮಿಗೆ ಅಪಾರ ಕೊಡುಗೆಯನ್ನು ನೀಡಿದರು. ಉನ್ನತ ಶಿಕ್ಷಣ ಪಡೆದ ಕೈಲಾಸಂ ಉತ್ತಮ ಜ್ಞಾನಿ ಮತ್ತು ಕ್ರೀಡಾಪಟುಗಳು ಆಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಬಿ.ಕೆ.ಆರಾಧ್ಯ, ಶಿವಲಿಂಗ ಮೂರ್ತಿ, ಮಹೇಶ್ ಗೌಡ, ಪರಶಿವಪ್ಪ, ಮಂಜುನಾಥ್, ಮಾದೇವ ಶೆಟ್ಟಿ, ಲೋಕೇಶ್ ನಾಯ್ಕ ಇತರರು ಹಾಜರಿದ್ದರು.