ಹಾಸನ: ಕನ್ನಡ ಸಾಹಿತ್ಯ ಪರಂಪರೆಗೆ ಕ್ರಿ.ಶ.1ನೇ ಶತಮಾನದಿಂದಲೂ ಇತಿಹಾಸ ಇದೆ ಎಂದು ನಾಡೋಜ ಡಾ.ಹಂಪ ನಾಗರಾಜಯ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರದಿಂದ ಹಮ್ಮಿಕೊಂಡಿರುವ ಎರಡು ದಿನಗಳ ಹಾಸನ ಸಾಹಿತ್ಯೋತ್ಸವ-2025ಅನ್ನು ಹೊಂಬಾಳೆ ತೆರೆದು ರಾಶಿಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದ, ಶಾತವಾಹನ ರಾಜ ಹಾಲರಾಜ, ಬಾದಾಮಿ ಚಾಲುಕ್ಯ ಅರಸ ಪುಲಕೇಶಿ, ರಾಷ್ಟ್ರಕೂಟರ ಕಾಲದಲ್ಲಿ ಅರಿಕೇಸರಿಯಿಂದ ಪಂಪ ಮಹಾಕವಿ ಅವಧಿಯಿಂದಲೂ ಸಾಹಿತ್ಯ ಸಂಭ್ರಮಕ್ಕೆ ಸುದೀರ್ಘ ಇತಿಹಾಸ ಇದೆ ಎಂದು ನುಡಿದರು.
ನಮ್ಮ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಹುದೊಡ್ಡ ಕವಿ ಪರಂಪರೆ ಇದೆ. ದೇಶದಲ್ಲೇ ಯಾರೊಬ್ಬರೂ ಮುಟ್ಟಲೂ ಧೈರ್ಯ ಮಾಡದ ವ್ಯಾಸ ಭಾರತವನ್ನು ಪಂಪ ಮಹಾಕವಿ ಕನ್ನಡಕ್ಕೆ ವಿಕ್ರಮಾರ್ಜುನ ವಿಜಯವಾಗಿ ತಂದನು. ಇದು ರಚನೆಯಾಗಿದ್ದು ಕೇವಲ 6 ತಿಂಗಳ ಅಂತರದಲ್ಲಿ ಎಂಬುದು ಗಮನಾರ್ಹ. ರನ್ನ, ಕುಮಾರವ್ಯಾಸ ಅವರೂ ಶ್ರೇಷ್ಠ ಕೃತಿ ನೀಡಿದರು. ಆಗಿನಿಂದಲೂ ಪ್ರಾಕೃತ-ಸಂಸ್ಕೃತವನ್ನು ತಾಯಿಯ ಎರಡು ಮೊಲೆ ಹಾಲಂತೆ ಓದಿ ಜೀರ್ಣಿಸಿಕೊಂಡು ಭಾಷಾಂತರ, ಅನುವಾದ, ಮರುಸೃಷ್ಟಿ ಮಾಡಿದವರು ನಮ್ಮ ಪುರಾತನ ಕವಿಗಳು. ಅನ್ಯಭಾಷೆಯ ಮೇರು ಕೃತಿಗಳು ಕನ್ನಡಕ್ಕೆ ಕೇವಲ ಭಾಷಾಂತರಗೊಳ್ಳಲಿಲ್ಲ, ಬದಲಾಗಿ ಹೊಸ ಬೆಳಕು, ಕಾಂತಿಯಾಗಿ ಬಂದವು. ಮೂಲದಲ್ಲಿ ಇಲ್ಲದೇ ಇರುವುದನ್ನು ನಮ್ಮ ಕವಿಗಳು ಅಸಾಧಾರಣವಾಗಿ ಮರು ಸೃಷ್ಟಿಸಿದ್ದಾರೆ. ಅಂತಹ ಕನ್ನಡ ಕವಿಗಳ ಸೃಜನಶೀಲತೆ, ಧಾರಣತ್ವ, ವಿಸ್ತಾರ, ಅನನ್ಯತೆಯ ವೈಭವನ್ನು ಮನಗಾಣಿಸುವ ವೇದಿಕೆ ಇದು ಎಂದರು.
ಇಂಥ ಸಂಭ್ರಮ ಜಿಲ್ಲಾಮಟ್ಟದಲ್ಲೂ ಮೇಳೈಸಬೇಕು, ಅರ್ಥವಂತಿಕೆ ಸಿಗಬೇಕು ಎಂಬ ಕಾರಣಕ್ಕೆ ಹಾಸನದಲ್ಲಿ 2ನೇ ಬಾರಿಗೆ ಸಾಹಿತ್ಯದ ವಿವಿಧ ಪ್ರಾಕಾರಗಳನ್ನು ಸಂಭ್ರಮಿಸುವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸ ತಂದಿದೆ. ನಿಜಕ್ಕೂ ಇದೊಂದು ಮಹತ್ವದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಚಾಲಕರ ನುಡಿಗಳನ್ನಾಡಿದ ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್, 2022 ಅಕ್ಟೋಬರ್‌ನಲ್ಲಿ ಧಾರವಾಡದ ಸಾಹಿತ್ಯ ಸಂಭ್ರಮ ಮಾದರಿ ಹೊಯ್ಸಳ ಸಾಹಿತ್ಯೋತ್ಸವ ನಡೆದು ಯಶಸ್ಸು ಕಂಡು ಕನ್ನಡದ ವಿದ್ವತ್‌ಲೋಕದ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ 2ನೇ ಆವೃತ್ತಿ ನಡೆಯುತ್ತಿದೆ. ಸಾಹಿತ್ಯ, ವಿಚಾರಗೋಷ್ಟಿ ಆಯೋಜನೆಯಲ್ಲಿ ಸಾಹಿತ್ಯಿಕ, ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ರಂಗಭೂಮಿ, ಪರಿಸರ ಗೀತೆ, ಸಂಗೀತ, ಕೃತಕ ಬುದ್ಧಿಮತ್ತೆ, ಮಹಿಳಾ ಸಾಹಿತ್ಯದ ಮೇಲೆ ಚರ್ಚೆ ನಡೆಯಲಿದೆ, ಖ್ಯಾತ ಸಾಹಿತಿಗಳ ಜತೆಗೆ ಯುವ ಸಾಹಿತಿಗಳೂ ಭಾಗಿಯಾಗುವರು. ಇದು ಎಲ್ಲರಿಗೂ ಪ್ರಿಯ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಜೋಗಿ ಅವರು, ಕ್ರೌರ್ಯ ಕಾರುಣ್ಯದ ಕಣ್ಣು ಬದಲಿಸುವ ಶಕ್ತಿ ಇರೋದು ಸಾಹಿತ್ಯಕ್ಕೆ, ತಾಪ, ತಪ ಮಾಡುವ, ಎಲ್ಲರ ನೋವು ನಮ್ಮ ನೋವು ಎಂದು ಸ್ಪಂದಿಸಿ ಸಮಾಧಾನ ಮಾಡುವುದು ಸಾಹಿತ್ಯ. ಈ ಸಾಹಿತ್ಯದ ಸೌರಭ ಎಲ್ಲರಿಗೂ ಮುಟ್ಟಬೇಕು ಎಂಬುದು ಈ ಕಾರ್ಯಕ್ರಮದ ಆಶಯ. ನಮ್ಮ ಸಾಹಿತ್ಯ ಪರಂಪರೆ ಬಲು ದೊಡ್ಡದು, ಸಾಹಿತಿಗಳ ದೊಡ್ಡದೊಂದು ತಲೆಮಾರು ಇದೆ. ಅವರ ಸಾಧನೆ, ಆಶಯ, ಕೊಡುಗೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಈ ಮೂಲಕ ನಡೆಯುತ್ತಿದೆ. ಲೋಲುಪತೆ ದಾಟುವ ಸೇತುವೆ ಸಾಹಿತ್ಯ ಎಂದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಹಾಸನ ಜಿಲ್ಲೆಗೆ ಪ್ರತ್ಯೇಕ ಸ್ಥಾನವಿದೆ. ಬೇರೆ ಭಾಷೆಯ ಸೋಂಕಿಲ್ಲದೆ ಶುದ್ಧ ಕನ್ನಡ ಭಾಷೆ ಬಳಕೆ ಮಾಡುವ ಜಿಲ್ಲೆ ನಮ್ಮೂರು. ಅನೇಕ ಸಾಹಿತಿಗಳು ಜಿಲ್ಲೆಯಿಂದ ಉದಯಿಸಿದ್ದಾರೆ. ಇಂಥ ಸಾಹಿತ್ಯ ಚಟುವಟಿಕೆ ಮತ್ತೆ ಮತ್ತೆ ನಡೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಬದಲಾಗಬೇಕು. ಕನ್ನಡ ಓದುಗರು ಕಡಿಮೆಯಾದರೆ ಕಷ್ಟದ ಕಾಲ ಎದುರಾಗಲಿದೆ. ಕನ್ನಡ ಓದಿದರೆ ಸಾಹಿತ್ಯವೂ ಬೆಳೆಯಲಿದೆ. ಅಂತಹ ಬದಲಾವಣೆ ತರುವ ಕೆಲಸ ಈ ಮೂಲಕ ಆಗಬೇಕು. ಹೆಚ್ಚು ಜನ ಕನ್ನಡ ಓದೋಣ, ಸಾಹಿತ್ಯ ಅಧ್ಯಯನ ಮಾಡೋಣ, ಆ ಅಭ್ಯಾಸ ಬೆಳೆಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಧಾರವಾಡ ಸಾಹಿತ್ಯ ಸಂಭ್ರಮ ಪ್ರೇರಣೆಯಿಂದ ಎರಡನೇ ಬಾರಿಗೆ ಹಾಸನದಲ್ಲಿ ಸಾಹಿತ್ಯೋತ್ಸವ ಮಾಡುತ್ತಿದ್ದೇವೆ. ಗಿರಡ್ಡಿ ಗೋವಿಂದರಾಜು, ರಾಘವೇಂದ್ರ ಪಾಟೀಲ ಮೊದಲಾದವರು ಉಣ ಬಡಿಸಿದ ಸಾಹಿತ್ಯದ ರಸದೌತಣವನ್ನು ಮುಂದುವರಿಸುವ ಪುಟ್ಟ ಹೆಜ್ಜೆ ನಮ್ಮದು ಎಂದರು.
ಈ ವೇಳೆ ಅಶೋಕ್ ಹಾರನಹಳ್ಳಿ ಅವರು ಡಾ.ಕಂಬಾರರಿಗೆ ಚಿನ್ನದ ಲೇಖನಿ ನೀಡಿ ಗೌರವಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಅವರಿಗೆ ಅಗಲಿಕೆಗೆ ಒಂದು ನಿಮಿಷ ಮೌನ ಆಚರಿಸಲಾಯಿತು. ವಿಜಯ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಜಾನಪದ ನೃತ್ಯ ಮಾಡುವ ಮೂಲಕ ಸಾಹಿತ್ಯೋತ್ಸವಕೆ ಶುಭ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯೋತ್ಸವದ ಅಧ್ಯಕ್ಷ ಎಚ್.ಬಿ.ಮದನಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಕೇಂದ್ರ ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ನಗರಸಭೆ ಅಧ್ಯಕ್ಷ ಚಂದ್ರೇಗೌಡ ಪಾಲ್ಗೊಂಡಿದ್ದ ಕಸಾಪ ಗೌರವ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನ ಕುಮಾರ್ ನಿರೂಪಿಸಿದರೆ, ಬಿ.ಆರ್.ಬೊಮ್ಮೇಗೌಡ ವಂದಿಸಿದರು.