ಮೈಸೂರು: ಜಾನಪದರ ನಡೆ ನುಡಿಯಲ್ಲಿ ಸಾಮಾಜಿಕ, ಕುಟುಂಬದ ಮೌಲ್ಯ ಇದೆ. ಮೌಲ್ಯವೇ ಜಾನಪದರ ಬಾಳಿನ ದೀಪ. ಇವರದು ಅಪ್ಪಿಕೊಳ್ಳುವ ಸಂಸ್ಕೃತಿ, ಆಪ್ತತೆಯ ಸಂಸ್ಕೃತಿ ಎಂದು ಬೆಳಗಾವಿ ಕುಸುಮಾವತಿ ಮಿರಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಹೊಂಬಯ್ಯ ಹೇಳಿದರು
ಐಕ್ಯೂಎಸಿ ಸಹಯೋಗದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ: ಜೀವನ ಮೌಲ್ಯ’ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆ ಮೌಲ್ಯದಿಂದಲೇ ತುಂಬಿದೆ. ಜಾನಪದ ಸಾಹಿತ್ಯದ ಗರತಿಯರ ಹಾಡುಗಳಲ್ಲಿ ಮೌಲ್ಯ ಇದೆ. ಕಲ್ಲು ಕೊಟ್ಟಮ್ಮಗೆ ಎಲ್ಲ ಭಾಗ್ಯವು ಬರಲಿ, ಪಲ್ಲಕ್ಕಿಯ ಮೇಲೆ ಮಗ ಬರುವಂತಾಗಲಿ, ಮಲ್ಲಿಗೆ ಮುಡಿವ ಸೊಸೆ ಬರಲಿ… ಎಂದು ಜಾನಪದರು ಹಾಡಿದ್ದಾರೆ. ಇವತ್ತಿನ ಸಂದರ್ಭ ಹೇಗಿದೆ? ಮಗ ಕಂಪ್ಯೂಟರ್ ಕಲಿಯಲಿ, ಸೈಟ್ ತರುವ ಸೊಸೆ ಬರಲಿ ಎಂಬ ಸ್ಥಿತಿಗೆ ತಲುಪಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಕವಿ ಮ್ಯಾಥ್ಯೂ ಆರ್ನಲ್ಡ್ ಮೃಗತ್ವ ಕಳೆದು ಮಾನವತ್ವ ತುಂಬುವುದೇ ಮೌಲ್ಯ ಎಂದಿದ್ದಾರೆ. ಪಂಪ ಹೇಳಿದಂತೆ ಮನುಷ್ಯ ಜಾತಿ ತಾನೊಂದೇ ವಲಂ, ದೇವನೂರ ಮಹಾದೇವರ ಸಂಬಂಜ ಅನ್ನೋದು ದೊಡ್ಡದು ಕನಾ… ಸಾಲುಗಳು ಮೌಲ್ಯಗಳ ತಳಪಾಯ. ಆದರೆ, ಇವತ್ತು ಸಮಾಜದಲ್ಲಿ ಅಪಮೌಲ್ಯಕ್ಕೆ ಒತ್ತು ಕೊಡುತ್ತಿದ್ದೇವೆ. ಆಧುನಿಕ ಬದುಕು ಮೌಲ್ಯವನ್ನು ಪಲ್ಲಟಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶರಣರು, ವಚನಕಾರರ ನಡೆ-ನುಡಿಯೂ ಮೌಲ್ಯ ಮೀರಲಿಲ್ಲ. ಕವಿರಾಜಮಾರ್ಗ ವಿವೇಕವೇ ಕನ್ನಡದ ಮಾರ್ಗವಾಯಿತು. ಮೌಲ್ಯದ ಪರಿಕಲ್ಪನೆಗೆ ಜನ್ನನ ಯಶೋಧರ ಚರಿತ್ರೆ ಕಾವ್ಯವೇ ಸಾಕು ಅನಿಸುತ್ತದೆ. ರಾಘವಾಂಕ ಹರಿಶ್ಚಂದ್ರ ಕಾವ್ಯದ ಮೂಲಕ ಕನ್ನಡದ ಸರಸ್ವತಿ ದೇಗುಲದ ಮೇಲೆ ಸತ್ಯದ ಗುಡಿ ಕಟ್ಟಿದ. ಸತ್ಯಕ್ಕೆ ತಪ್ಪಿ ನಡೆದರೆ ಮೆಚ್ಚನ ಪರಮಾತ್ಮನು ಎಂಬ ಗೋವಿನ ಹಾಡಿಗಿಂತ ಮೌಲ್ಯವಿರುವುದೇ ಎಂದರು.
ತ್ಯಾಗ ಮತ್ತು ಭೋಗ ಎಂಬ ಎರಡು ಮೌಲ್ಯಕ್ಕೆ ಸಹೋದರರಾದ ಭರತ ಮತ್ತು ಬಾಹುಬಲಿ ಉದಾಹರಣೆ. ಅಣ್ಣನನ್ನು ಜಯಿಸಿದ ಬಾಹುಬಲಿ ವೈರಾಗ್ಯ ತಾಳಿ ದಿಗಂಬರನಾದ. ಭರತ ಭೋಗವನ್ನಪ್ಪಿಕೊಂಡು ರಾಜ್ಯವನ್ನಾಳಿದ. ಸೈನಿಕರಿಗೆ ದೇಶಪ್ರೇಮದ ಬದ್ಧತೆ ಇಲ್ಲದಿದ್ದರೆ ನಿರಾತಂಕವಾಗಿ ಇರಲು ಸಾಧ್ಯವಿಲ್ಲ. ದೇಶಪ್ರೇಮವೂ ಒಂದು ಮೌಲ್ಯ ಎಂದರು.
ಮೌಲ್ಯಕ್ಕೆ ಬೆಲೆ ಕಟ್ಟುವುದೆಂದರೆ ಮೌಲ್ಯ ಕುಸಿಯದ ರೀತಿಯಲ್ಲಿ ನಡೆಯುವುದು. ಪರೋಪಕಾರ, ಸಹನೆ, ಸ್ವಾಭಿಮಾನ, ಕಾಯಕ, ಸಮಾನತೆ, ಶಿಕ್ಷಣ, ಸರಳ ಜೀವನ ಮೌಲ್ಯದ ಪ್ರಮುಖಾಂಶಗಳು. ದಲಿತ ಬಂಡಾಯ ಸಾಹಿತ್ಯದಲ್ಲಿ ಸಮಾನತೆಯೂ ಒಂದು ಮೌಲ್ಯ ಎಂದು ತಿಳಿಸಿದರು.
ಸಾಹಿತ್ಯದ ಪರಿಭಾಷೆಯಲ್ಲಿ ಮುಟ್ಟುವ ಕ್ರಮ ಭೇದವನ್ನು ನಿವಾರಿಸಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅಸಮಾನ ಸಮಾಜದಲ್ಲಿ ಮುಟ್ಟುವುದು ಒಂದು ಮೌಲ್ಯವಾಗಿದೆ. ಎಲ್ಲರಿಗೂ ಒಂದೇ ಮನಸ್ಸು. ಡಬಲ್ ಆ್ಯಕ್ಟಿಂಗ್ ಮಾಡುತ್ತಿರುತ್ತೇವೆ. ಏಕಮುಖ ಆಲೋಚನೆ, ಧನಾತ್ಮಕ ಚಿಂತನೆ ಹೊಂದುವುದು ಮುಖ್ಯ ಎಂದರು.
ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದಲ್ಲಿ ಎಲ್ಲ ಮೌಲ್ಯ ಇದೆ. ಅವರ ಕವಿತೆ, ನಾಟಕ, ಕಥೆ, ಕಾದಂಬರಿಗಳು ಜೀವನ ಪಾಠ ಕಲಿಸುತ್ತವೆ. ಓ ನನ್ನ ಚೇತನದ ಕವಿತೆಯಲ್ಲಿ ಮೌಲ್ಯದ ಪೂರ್ಣದೃಷ್ಟಿ ಇದೆ ಎಂದರು.
ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಉಪಸ್ಥಿತರಿದ್ದರು.