ಸೋಮವಾರಪೇಟೆ: ನಾಡಿನ ಹೆಸರಾಂತ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಇಲ್ಲಿನ ಕನ್ನಡ ಸಿರಿ ಬಳಗದ ವತಿಯಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಟಕ, ಕವನ ಸಂಕಲನ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರ ಸಾಹಿತ್ಯ ಸೇವೆಯನ್ನು ಬಣ್ಣಿಸಿದರು.
ಗ್ರಾಮೀಣ ಪ್ರದೇಶದಿಂದ ಅರಳಿದ ಪ್ರತಿಭೆಯಾದ ಸಾಹಿತಿ ವೆಂಕಟೇಶಮೂರ್ತಿ ಅವರು, ಗ್ರಾಮೀಣ ಸೊಗಡಿನ ಮತ್ತು ಪರಿಸರದ ಕುರಿತು ನೈಜ ಕಾಳಜಿ ಹೊಂದಿದ್ದರಲ್ಲದೆ, ತಮ್ಮ ಅನುಭವದಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಅವರ ನಿಧನದಿಂದಾಗಿ ಕನ್ನಡ ನಾಡು ಒಬ್ಬ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದರು.
ಕನ್ನಡ ಸಿರಿ ಬಳಗದ ಅಧ್ಯಕ್ಷ ಎಚ್.ಜೆ.ಜವರಪ್ಪ, ಹಿರಿಯ ಸಾಹಿತಿಗಳಾದ ಜಲ ಕಾಳಪ್ಪ, ನ.ಲ.ವಿಜಯ ಅಗಲಿದ ಸಾಹಿತಿಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗಾಯಕರಾದ ಶರ್ಮಿಳಾ ರಮೇಶ್, ಸುಮತಿ ಅವರು ಎಚ್.ಎಸ್.ವಿ ಅವರು ರಚಿಸಿದ ಗೀತೆಗಳನ್ನು ಸುಮಧುರವಾಗಿ ಹಾಡಿದರು.
ಸಾಹಿತಿ ಸಿ.ಕೆ.ಮಲ್ಲಪ್ಪ, ಜಾನಪದ ಪರಿಷತ್‌ನ ನಿರ್ದೇಶಕಿ ರೇಣುಕಾ ವೆಂಕಟೇಶ್, ಶಿಕ್ಷಕಿ ಕವಿತಾ ಜನಾರ್ದನ್ ಮತ್ತಿತರರು ಇದ್ದರು.