ಚಿತ್ರದುರ್ಗ: ಎಲ್ಲ ಜನರಿಗೆ ಅರ್ಥವಾಗುವಂತಹ, ಎಲ್ಲರ ಮನಸ್ಸಿಗೆ ಬೆಳಕಾಗುವಂತಹ ಬರಹ. ಪುಟ್ಟಪುಟ್ಟ ವಾಕ್ಯಗಳು. ಲವಲವಿಕೆಯ ಶೈಲಿ. ವರ್ಣಿಸಿದ್ದು ಕಣ್ಣಿಗೆ ಕಟ್ಟುತ್ತದೆ. ಅಭಿಪ್ರಾಯ ಹೇಳುವ ವಾಕ್ಯ ಮನಸ್ಸಿನಲ್ಲಿ ಮನೆ ಮಾಡುತ್ತದೆ....
ನಾಡಿನ ಹೆಮ್ಮೆಯ ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಿದ್ದವ್ವನಹಳ್ಳಿ ಕೃಷ್ಣಶರ್ಮ ಅವರ ಬರಹದ ಪರಿ ಇದು. ಅವರ ಸ್ಮರಣೆಗೆ ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗ ಹಾಗೂ ಜಿಲ್ಲಾ ಸಮಿತಿಯಿಂದ ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿ ಜ್ಞಾನಪೂರ್ಣ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಕಾರ್ಯಕ್ರಮ ನಡೆದ ಅವಧಿಯುದ್ದಕ್ಕೂ ವಿದ್ಯಾರ್ಥಿಗಳು ಮೊಬೈಲ್ ಲೋಕದಿಂದ ದೂರವಿದ್ದು, ಲವಲವಿಕೆಯಿಂದ ಭಾಗವಹಿಸಿದರು. ಮೂರು ಗೋಷ್ಠಿಗಳಲ್ಲಿ ವಾಗ್ಮಿಗಳು ಮಂಡಿಸಿದ ವಿಷಯಗಳನ್ನು ಎದೆಯಲ್ಲಿ ಇಳಿಸಿಕೊಂಡರು.
ವಿಚಾರ ಸಂಕಿರಣಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ಕೃಷ್ಣಶರ್ಮ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ನಂತರ ಸಿದ್ದವ್ವನಹಳ್ಳಿಯಿಂದ ಚಿತ್ರದುರ್ಗಕ್ಕೆ ಹೋಗುವ ರಸ್ತೆಗೆ ಕೃಷ್ಣಶರ್ಮರ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಕೃಷ್ಣಶರ್ಮ ಅವರ ಪುತ್ರಿ, ಲೇಖಕಿ ರಾಧಾ ಟೇಕಲ್ ಮೆರವಣಿಗೆಗೆ ಚಾಲನೆ ನೀಡಿ, ನಾಮಫಲಕ ಅನಾವರಣಗೊಳಿಸಿದರು.
ಕನ್ನಡ ಸಂಸ್ಕೃತಿ ಎತ್ತಿ ಹಿಡಿದ ಮೇರು ವ್ಯಕ್ತಿತ್ವ
ವಿಚಾರ ಸಂಕಿರಣ ಉದ್ಘಾಟಿಸಿದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಸಿದ್ದವ್ವನಹಳ್ಳಿ ಕೃಷ್ಣಶರ್ಮ ಅವರು ಭಾರತೀಯ ಸಂಸ್ಕೃತಿಯ ಚೌಕಟ್ಟಿನ ಒಳಗೆ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಮೇರು ವ್ಯಕ್ತಿತ್ವ ಮೆರೆದಿದ್ದಾರೆ ಎಂದು ಹೇಳಿದರು.
ಅವರು ಎಂಥದ್ದೇ ಕಷ್ಟ ಕಾಲದಲ್ಲೂ ಯಾರನ್ನೂ ಬೇಡಿದವರಲ್ಲ. ಅಸಾಮಾನ್ಯ ಪ್ರತಿಭೆ ಹೊಂದಿದ್ದು, ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 140 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಬರವಣಿಗೆ ಮೂಲಕ ಎಲ್ಲರ ಅಂತರಂಗದಲ್ಲೂ ನೆಲೆಸಿದ್ದಾರೆ ಎಂದರು.
ಉರ್ದು, ಮರಾಠಿ ಭಾಷೆಗಳ ಒತ್ತಡದ ಕಾಲದಲ್ಲಿ ಕನ್ನಡದ ಉಳಿವಿಗೆ ಶ್ರಮಿಸಿದವರು. ಇವರು ಸ್ವದೇಶಿ ಭಾವನೆ, ಸ್ವಧರ್ಮ ಕುರಿತಂತೆ ಜನರಲ್ಲಿ ಪ್ರಜ್ಞೆ ಮೂಡಿಸಿದರು. ಅನೇಕ ಪತ್ರಿಕೆಗಳಿಗೆ ಅಂಕಣ ಬರೆಯುವ ಜತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ಜತೆ ತೊಡಗಿಸಿಕೊಂಡಿದ್ದರು. ಅನೇಕ ಲೇಖಕರನ್ನು ಬೆಳೆಸಿದರು. ಪ್ರಶಿಕ್ಷಣಾರ್ಥಿಗಳು ಕುವೆಂಪು, ದ.ರಾ.ಬೇಂದ್ರೆ, ಸಿದ್ದವ್ವನಹಳ್ಳಿ ಕೃಷ್ಣಶರ್ಮರಂಥ ಮಹನೀಯರ ಕೃತಿಗಳ ಅಧ್ಯಯನ ಮಾಡಬೇಕೆಂದು ಮನವಿ ಮಾಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್, ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ, ಸಂಸ್ಕಾರ ಭಾರತಿ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ವಿ. ತುಪ್ಪದ್, ಸಂಸ್ಕಾರ ಭಾರತೀ ದಕ್ಷಿಣ ಪ್ರಾಂತ್ಯ ಸಾಹಿತ್ಯ ವಿಭಾಗದ ಸಂಚಾಲಕ ಡಾ.ಕೆ. ರಾಜೀವಲೋಚನ ಮಾತನಾಡಿದರು. ಸಂಸ್ಕಾರ ಭಾರತೀ ಜಿಲ್ಲಾ ಸಮಿತಿ ಸಾಹಿತ್ಯ ವಿಭಾಗದ ಸಂಚಾಲಕಿ ಚಂದ್ರಿಕಾ ಸುರೇಶ್, ಪ್ರಾಂತ್ಯ ಕಾರ್ಯದರ್ಶಿ ಮಾರುತಿ ಮೋಹನ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ್ ಇದ್ದರು.
ಕೋಟ್
ಕೃಷ್ಣಶರ್ಮರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ವಿಚಾರಧಾರೆಗಳಿಗೆ ಒತ್ತು ಕೊಟ್ಟಿದ್ದಾರೆ. ಬರದ ನಾಡು ಚಿತ್ರದುರ್ಗ ಜಿಲ್ಲೆ ಸಾಹಿತ್ಯದಲ್ಲಿ ಸಮೃದ್ಧಿಯಿಂದ ಕೂಡಿದೆ. ದೊಡ್ಡಸಿದ್ದವ್ವನಹಳ್ಳಿಯಲ್ಲಿ ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಗ್ರಾಪಂ ಕಟ್ಟಡ ನಿರ್ಮಿಸಿ, ಅದಕ್ಕೆ ರಾಷ್ಟ್ರೀಯ ನಾಯಕ ಎಸ್. ನಿಜಲಿಂಗಪ್ಪ ಹಾಗೂ ಸಭಾಂಗಣಕ್ಕೆ ಕೃಷ್ಣಶರ್ಮರ ಹೆಸರಿಡಲಾಗುವುದು.
ಕೆ.ಎಸ್. ನವೀನ್, ಎಂಎಲ್‌ಸಿ
ಕೋಟ್
ಶೀಘ್ರದಲ್ಲೇ ದೊಡ್ಡಸಿದ್ದವ್ವನಹಳ್ಳಿಯಲ್ಲಿ ನಿರ್ಮಿಸುವ ನೂತನ ವಸತಿ ಶಾಲೆಗಳ ಕಟ್ಟಡಗಳಿಗೆ ನಿಜಲಿಂಗಪ್ಪ ಹಾಗೂ ಕೃಷ್ಣಶರ್ಮರ ಹೆಸರು ಇಡಲಾಗುವುದು.
ವೆಂಕಟೇಶ್‌ರೆಡ್ಡಿ, ಜ್ಞಾನಪೂರ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ, ದೊಡ್ಡಸಿದ್ದವ್ವನಹಳ್ಳಿ
ಗಾಂಧಿವಾದ ಪಾಲಿಸುತ್ತಲೇ ಕ್ರಾಂತಿ
ಗಾಂಧಿವಾದ ಪಾಲಿಸುತ್ತಲೇ ಕ್ರಾಂತಿ ಸಾಧಿಸಿದ್ದು ಸಿದ್ದವ್ವನಹಳ್ಳಿ ಕೃಷ್ಣ ಶರ್ಮ ಅವರ ಹೆಗ್ಗಳಿಕೆ ಎಂದು ಸಂಸ್ಕೃತಿ ಚಿಂತಕ ಡಾ. ಜಿ.ಬಿ.ಹರೀಶ್ ಹೇಳಿದರು.
ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಬದುಕು-ಬರಹ ಕುರಿತು ವಿಷಯ ಮಂಡಿಸಿದ ಅವರು, ಬರವಣಿಗೆಯಲ್ಲಿ ಕ್ಷಾತ್ರ ತೇಜಸ್ಸನ್ನು ಹೊಂದಿದ್ದ ಕೃಷ್ಣಶರ್ಮ ಸತ್ಯನಿಷ್ಠ, ಪ್ರಾಮಾಣಿಕರಾಗಿದ್ದರು. ತಮ್ಮ ಲೇಖನಿಯನ್ನು ಹಣಕ್ಕಾಗಿ, ಅಧಿಕಾರಕ್ಕಾಗಿ ಮಾರಿಕೊಳ್ಳಲಿಲ್ಲ. ಸ್ವಾತಂತ್ರೃ ಹೋರಾಟದ ಅವಧಿಯಲ್ಲಿ ಹರಿತ ವರದಿಗಳ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರ ವ್ಯಕ್ತಿತ್ವವೇ ಮೂಲ ಎಂದು ವಿವರಿಸಿದರು.
ಗಾಂಧೀಜಿಯವರ ಬರಹಗಳನ್ನು ಅನುವಾದ ಮಾಡುವಲ್ಲಿ ಅವರ ಸಮರ್ಪಣಾ ಭಾವ ಎದ್ದುಕಾಣುತ್ತದೆ. ಆದರೆ ಗಾಂಧೀಜಿಯವರ ಇನ್ನೊಂದು ಮುಖದ ಪರಿಚಯ ಅವರಿಗೆ ಆಗಿರಲಿಲ್ಲ ಎಂದು ವಿಷಾದಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಪತ್ರಿಕಾ ಬರಹಗಳ ಅವಲೋಕನ ಕುರಿತು ವಿಷಯ ಮಂಡಿಸಿ, ಕೃಷ್ಣ ಶರ್ಮ ಅವರ ವರದಿಗಳ ತುಣುಕುಗಳನ್ನು ತೆರೆದಿಟ್ಟರು. ಅವರ ಬರಹದ ಶೈಲಿ ವಿದ್ಯಾರ್ಥಿಗಳಲ್ಲಿ ರೋಮಾಂಚನ ಮೂಡಿಸಿತು.
ಪ್ರಮುಖ ಕೃತಿಗಳ ಅವಲೋಕನ ಕುರಿತು ವಿಮರ್ಶಕಿ ಡಾ.ತಾರಿಣಿ ಶುಭದಾಯಿನಿ ವಿಷಯ ಮಂಡಿಸಿದರು.