ಕನ್ನಡ ಶಾಲೆಗಳ ರಕ್ಷಣೆಗೆ ಆಗ್ರಹಿಸಿ ಬೀದರ್‌ನಲ್ಲಿ ಸೋಮವಾರ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಧರಣಿಯಲ್ಲಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ, ಶಶಿಧರ ಹೊಸಳ್ಳಿ, ಸುರೇಶ ಚನ್ನಶೆಟ್ಟಿ, ರಾಜೇಂದ್ರ ಮಣಗೇರಿ ಇತರರಿದ್ದರು. 
ಜಿಲ್ಲೆ

ಕನ್ನಡ ಶಾಲೆಗಳ ರಕ್ಷಣೆಗೆ ಕ್ರಮವಹಿಸಿ

ಬೀದರ್: ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸಬೇಕಾಗಿದೆ. ರಾಜ್ಯದಲ್ಲಿನ ಕನ್ನಡ ಶಾಲೆಗಳನ್ನು ಸಂರಕ್ಷಣೆಗೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಸಹಕಾರೊಂದಿಗೆ ಹೋರಾಟ ನಡೆಸಿ, ಸರ್ಕಾರದ ನಾನಾ ಕಠಿಣ ನಿಯಮ ಹಾಗೂ ಇತರ ಕಾರಣಗಳಿಂದ ಕಳೆದ ಒಂದು ದಶಕದಲ್ಲಿ ರಾಜ್ಯಾದ್ಯಂತ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ಮಾತೃ ಭಾಷೆ ಉಳಿಯಬೇಕಾದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು ಎಂದು ಆಗ್ರಹಿಸಿದರು.

ಕನ್ನಡ ಶಾಲೆ ರಕ್ಷಣೆ ಮಾಡಬೇಕಾದರೆ ಸರ್ಕಾರವೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಆಂಗ್ಲ ಶಾಲೆಗಳನ್ನು ತೆರೆಯುತ್ತಿದೆ. ಇದು ಚಿಂತಾಜನಕ ವಿಷಯ. ಹಲವಾರು ಖಾಸಗಿ ಕನ್ನಡ ಶಾಲೆಗಳೂ ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ. ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ಇದ್ದು, ಕನ್ನಡ ಶಾಲೆಗಳ ಮಾರಣ ಹೋಮ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ, ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪ್ರಮುಖರಾದ ಹಣಮಂತರಾವ ಪಾಟೀಲ್ ರಾಜೇಂದ್ರ ಮಣಗೇರಿ, ಗುರುನಾಥರಡ್ಡಿ, ಮಾಣಿಕಪ್ಪ ಗೋರನಾಳೆ, ಮಹ್ಮದ್ ಸಲಾವುದ್ದೀನ್ ಫರಾನ್, ಸಂದೀಪ್ ಶೆಟಕಾರ, ಗಣಪತಿ ಸೋಲಪುರೆ, ವಿಜಯಸಿಂಗ್, ಸೈಯದ್ ಅಹ್ಮದ್ ಮುದ್ದೆ, ಬಸವರಾಜ ಬಶೆಟ್ಟಿ, ಸಲೀಮ್ ಪಾಶಾ, ಮಂಜುರ ಇರ್ಫಾನ್, ರವಿ ಸ್ವಾಮಿ ನಿರ್ಣಾ, ಪೀಟರ್ ಚಿಟಗುಪ್ಪ, ವೀರಶೆಟ್ಟಿ ಗೌಸಪುರೆ ಇತರರಿದ್ದರು.

ಅನುಮತಿ ನವೀಕರಣ ಸರಳಗೊಳಿಸಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು ಸೇರಿದಂತೆ ೯ ಬೇಡಿಕೆಗಳನ್ನು ಸಂಘ ಮಂಡಿಸಿದೆ. ಕನ್ನಡ ಶಾಲೆಗಳೂ ಪ್ರಾರಂಭಿಸಲು ಷರತ್ತುಗಳು ಸರಳಗೊಳಿಸಬೇಕು. ೧೯೯೫ರ ನಂತರ ಪ್ರಾರಂಭದ ಅನುದಾನರಹಿತ ಖಾಸಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡ ಮಕ್ಕಳ ದಾರಿದೀಪವಾದ ಆರ್‌ಟಿಇ ಮರು ಜಾರಿಗೊಳಿಸಬೇಕು. ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಬೇಕು. ೩೭೧(ಜೆ) ಅಡಿ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು. ಅನಧಿಕೃತ ಕೋಚಿಂಗ್ ಸೆಂಟರ್ ಬಂದ್ ಮಾಡಬೇಕು. ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ರೂಪಾಂತರಗೊಳಿಸುತ್ತಿರುವ ಪ್ರಕ್ರಿಯೆ ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿದ್ದಾರೆ.

ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಬೆಂಗಳೂರು ಚಲೋ: ಕನ್ನಡ ಶಾಲೆ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಧರಣಿ ಮಾಡಲಾಗಿದೆ. ಸರ್ಕಾರ ನಮ್ಮ ಬೇಡಿಕೆಗೆ ನಿರ್ಲಕ್ಷ್ಯ ಮಾಡಿದರೆ ಬರುವ ದಿನಗಳಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡು, ಬೃಹತ್ ಹೋರಾಟ ಮಾಡಲಾಗುವುದು ಎಂದು ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಹೇಳಿದರು. ಕನ್ನಡ ಶಾಲೆ ರಕ್ಷಣೆ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಪ್ರಮುಖರು, ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಹೋರಾಟಕ್ಕೆ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಮಾತೃಭಾಷೆ ಕನ್ನಡ ಶಾಲೆ ರಕ್ಷಣೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ರಾಜಧಾನಿಯಲ್ಲಿ ಬೃಹತ್ ಹೋರಾಟ ಮಾಡುವುದು ಅನಿವಾರ್ಯ ಎಂದರು.

ಸರ್ಕಾರದ ಕಠಿಣ ನಿಯಮಗಳಿಂದಾಗಿ ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆ ಸಂಖ್ಯೆ ಇಳಿಕೆಯತ್ತ ಸಾಗಿದೆ. ಗೋಕಾಕ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸದಿದ್ದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಉಳಿಗಾಲವಿಲ್ಲ

| ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನ

ರಾಜ್ಯ ಸರ್ಕಾರವೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಲ್ಲಿ ಕನ್ನಡದ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುತ್ತಿದೆ. ಇದು ಹೀಗೆ ಮುಂದುವರಿದರೆ ಕೆಲ ವರ್ಷಗಳಲ್ಲೇ ಕನ್ನಡ ಶಾಲೆಗಳನ್ನು ಹುಡುಕುವಂಥ ಸ್ಥಿತಿ ಬರಲಿದೆ. ಹೀಗಾಗಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೃಹತ್ ಹೋರಾಟ ಮಾಡಬೇಕಾಗಿದೆ.

| ಭಗವಂತ ಖೂಬಾ ಕೇಂದ್ರ ಮಾಜಿ ಸಚಿವ