ಕೂಡ್ಲಿಗಿ: ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಅತ್ಯಂತ ಶ್ರೀಮಂತವಾಗಿದೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಕ್ಷೇತ್ರದ ಸೇವೆಯೊಂದಿಗೆ ಕನ್ನಡ ಶಾಲೆಗಳನ್ನು ಆರಂಭಿಸಿದರು. ಸಹಕಾರ ತತ್ವದಲ್ಲಿ ಬ್ಯಾಂಕ್ ಆರಂಭಿಸಿದರು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಫ.ಗು.ಹಳಕಟ್ಟಿ ಅವರು ಧಾರ್ಮಿಕ, ವಚನ ಸಾಹಿತ್ಯ ಸಂಗ್ರಹದೊಂದಿಗೆ ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಜನೋಪಕಾರಿ ಕಾರ್ಯ ಮಾಡಿದ್ದಾರೆ. ವಕೀಲರಾಗಿದ್ದ ಹಳಕಟ್ಟಿ ಅವರು ವಚನಗಳ ಸಂಗ್ರಹ ಮತ್ತು ಪರಿಷ್ಕರಣೆಗೆ ವೈಯಕ್ತಿಕ ಜೀವನ ಮುಡಿಪಾಗಿಟ್ಟಿದ್ದರು. ವಚನಗಳ ಸಂಗ್ರಹವನ್ನು ಪ್ರಕಟಿಸಲು ಮನೆಯನ್ನು ಮಾರಿ, ಮುದ್ರಣಾಲಯ ಆರಂಭಿಸಿದರು. ಈ ಮೂಲಕ ವೈಯಕ್ತಿಕ ಜೀವನದಲ್ಲಿ ಬಡತನ ಆಹ್ಚಾನಿಸಿಕೊಂಡಿದ್ದರು ಎಂದು ತಿಳಿಸಿದರು.
ಹಳಕಟ್ಟಿ ಅವರ ಕೆಲಸವನ್ನು ಮೆಚ್ಚಿ ಗೌರವಿಸುವವರು ಹಲವರಿದ್ದರು. ಆದರೆ, ಅವರ ನೋವುಗಳನ್ನು ನಿವಾರಣೆ ಮಾಡುವಂತಹ ವ್ಯಕ್ತಿಗಳು ತುಂಬ ಕಡಿಮೆ ಇದ್ದರು. ಹಳಕಟ್ಟಿ ಅವರು ಹುಟ್ಟುಹಾಕಿದ ಹಲವಾರು ಸಂಘ-ಸಂಸ್ಥೆಗಳು ಇಂದಿಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಗಳಿಸಿವೆ ಎಂದು ಸ್ಮರಿಸಿದರು.
ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಉಪ ತಹಸೀಲ್ದಾರ್ ಚಂದ್ರಮೋಹನ್, ಮುರಳಿ ಕೃಷ್ಣ, ಮಂಜುನಾಥ, ಪ್ರಭು ಕುಮಾರ್, ವಾಸುದೇವ, ಸುನೀತಾ, ರಾಧ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.