ಜಿಲ್ಲೆ

ಕನ್ನಡ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಿ

ಕೂಡ್ಲಿಗಿ: ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಬೇಕು. 1995 ರ ನಂತರ ಆರಂಭವಾದ ಖಾಸಗಿ ಶಾಲೆ-ಕಾಲೇಜುಗಳಿಗೆ ಅನುದಾನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಬರೆದ ಮನವಿಯಲ್ಲಿ ಉಪ ತಹಸೀಲ್ದಾರ್ ಚಂದ್ರ ಮೋಹನ್‌ಗೆ ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಕನ್ನಡ ಸಂರಕ್ಷಣಾ ಸಮಿತಿ, ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳು ಸೋಮವಾರ ಸಲ್ಲಿಸಿದರು.

ಸರ್ಕಾರದ ಕಠಿಣ ನಿಯಮಗಳಿಂದಾಗಿ ಕಳೆದ 9ರಿಂದ 10 ವರ್ಷಗಳಲ್ಲಿ ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ಮಾತೃಭಾಷೆ ಉಳಿಯಬೇಕು ಹಾಗೂ ಕನ್ನಡ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಶಾಲೆ-ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. 371 (ಜೆ) ಕಾನೂನಿನಡಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಬೇಕು ಎಂದು ಆಗ್ರಹಿಸಲಾಯಿತು. ಕ-ಕ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ತಾಲೂಕು ಅಧ್ಯಕ್ಷ ಕೆ.ಜಿ.ಶ್ರೀನಿವಾಸ, ಕಾರ್ಯದರ್ಶಿ ಸಂಗಯ್ಯ ಹಿರೇಮಠ, ಶ್ರೀನಿವಾಸ ಜೋವಳ್ಳಿ, ಮಹಾಲಕ್ಷ್ಮೀ, ಚಂದ್ರಶೇಖರ, ಶ್ರೀನಿವಾಸ, ಪುರುಷೋತ್ತಮ, ಕರಿಬಸಮ್ಮ, ವಿದ್ಯಾ ಭೀಮೇಶ್ ಇದ್ದರು.