ಜಿಲ್ಲೆ

ಕನ್ನಡ ಶಾಲೆ ಯಾವ ಕಾರಣಕ್ಕೂ ಮುಚ್ಚಬಾರದು

ಚಿತ್ರದುರ್ಗ: ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸಾಪ 107ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಕಸಾಪ ಸರ್ವ ಸದಸ್ಯರ, ರಾಜ್ಯ ಕಾರ್ಯಕಾರಿಣಿ ಬರೀ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ಮುಂಚೆ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಆಯೋಜಿಸಿದ್ದು, ಈಗ ಮಲ್ಲಾಡಿಹಳ್ಳಿಯಲ್ಲಿ ನಡೆಸಿರುವುದು ಹೆಮ್ಮೆಯ ಸಂಗತಿ ಎಂದರು.

ಕಸಾಪ ರಾಜ್ಯದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇಂತಹ ಸಂಸ್ಥೆಯ ವಿರುದ್ಧ ಸಂತಾಪ ಸೂಚಿಸಿರುವ ನಿರ್ಮಲಾ ಎಲಿಗಾರ್ ನಡೆಯನ್ನು ಕನ್ನಡಿಗರು ಯಾರೂ ಸಹಿಸುವುದಿಲ್ಲ. ಆ ಕಾರಣಕ್ಕಾಗಿ ಅವರ ಸದಸ್ಯತ್ವ ರದ್ದು ಪಡಿಸಲಾಗಿದೆ. ಜನಸಾಮಾನ್ಯರ ಪರಿಷತ್ತು ಆಗಬೇಕೆಂದು ಅಂಗೈಯಲ್ಲಿ ಸದಸ್ಯತ್ವ ಪಡೆಯಲು ತಾಂತ್ರಿಕವಾಗಿ ಆ್ಯಪ್ ರೂಪಿಸಲಾಗಿದೆ ಎಂದು ತಿಳಿಸಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸಭೆ ಆಯೋಜಿಸಿರುವುದು ಸಂತಸದ ವಿಚಾರ. ಕನ್ನಡ ಕಟ್ಟುವ ಕಟ್ಟಾಳುಗಳು ಈ ಪುಣ್ಯಭೂಮಿಗೆ ಬಂದಿದ್ದೀರಿ. ಕನ್ನಡ ನಾಡು-ನುಡಿಗೆ ತಮ್ಮದೇ ಆದ ನಿಸ್ವಾರ್ಥ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಮುಂದಿನ ವರ್ಷ ಸಭೆ: ರಾಜ್ಯದ 27 ಜಿಲ್ಲೆಗಳಿಂದ, ಗಡಿನಾಡು ಘಟಕಗಳಿಂದಲೂ ಅಧ್ಯಕ್ಷರು ಭಾಗವಹಿಸಿದ್ದರು. ಮುಂದಿನ ಕಾರ್ಯಕಾರಣಿ ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣು ಗುಂಡಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. 2025ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದೆಹಲಿಯಲ್ಲಿ ಆಯೋಜಿಸುವ ಚಿಂತನೆಯೂ ವ್ಯಕ್ತವಾಯಿತು.

ಕೋಶಾಧ್ಯಕ್ಷ ಪಟೇಲ್ ಪಾಂಡು ಅವರು 2022-23ನೇ ಸಾಲಿನ ಆಯ-ವ್ಯಯ ಮಂಡಿಸಿ ಸರ್ವ ಸದಸ್ಯರ ಅನುಮೋದನೆ ಪಡೆದರು. ಇದೇ ವೇಳೆ ಜಾನಪದ ಕಲಾವಿದೆ ಹಲಗೆ ದುರುಗಮ್ಮ, ಜಾದೂ ಮೋಹನ್, ದೇವರಾಜಯ್ಯ ಅವರನ್ನು ಸನ್ಮಾನಿಸಲಾಯಿತು. ನಾಡಿನ ವಿವಿಧ ಭಾಗಗಳಲ್ಲಿ ನಾಡು-ನುಡಿಗಾಗಿ ಶ್ರಮಿಸಿ ಮಡಿದವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಕೇರಳ ಗಡಿನಾಡು ಕಸಾಪ ಘಟಕದ ಅಧ್ಯಕ್ಷರಾಗಿ ಡಾ.ಜಯಪ್ರಕಾಶ್ ಅವರನ್ನು ನೇಮಿಸಲಾಯಿತು.

ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಹೊಳಲ್ಕೆರೆ ಅಧ್ಯಕ್ಷ ಶಿವಮೂರ್ತಿ ಇತರರಿದ್ದರು.