ಸೊರಬದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಎಸ್.ಮಂಜುನಾಥ, ಪರಮೇಶ್ವರ, ಕೆ.ಪಿ.ಶ್ರೀಧರ, ಎಸ್.ರಾಘವೇಂದ್ರ, ಭರತ್ ಸ್ವಾಮಿ ಇತರರಿದ್ದರು. 
ಜಿಲ್ಲೆ

ಕನ್ನಡ ವಿರೋಧಿ ಶಕ್ತಿಗಳ ವಿರುದ್ಧ ಎಲ್ಲರೂ ಒಂದಾಗಿ

ಸೊರಬ: ಕನ್ನಡದ ನೆಲ-ಜಲ ನಮ್ಮ ಹಕ್ಕು. ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾದರೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ಬದ್ಧರಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ ಹೇಳಿದರು.

ಪಟ್ಟಣದಲ್ಲಿ ಭಾನುವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಮಾತೃಭಾಷೆ ಕನ್ನಡ ನಮಗೆ ಜೀವನ ಮತ್ತು ಬದುಕು ಕಟ್ಟಿಕೊಟ್ಟಿದೆ. ಇದಕ್ಕೆ ಕಿಡಿಗೇಡಿಗಳು ಹಾಗೂ ಸಮಾಜಘಾತಕ ಶಕ್ತಿಗಳಿಂದ ಅವಮಾನವಾದರೆ ಸಹಿಸಲು ಸಾಧ್ಯವಿಲ್ಲ. ನೆಲ, ಜಲ, ಭಾಷೆ ವಿಷಯದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತ ಸಮಾಜಕೆ ಒಳಿತಾಗುವ ಕೆಲಸದಲ್ಲಿ ಕೈಜೋಡಿಸಬೇಕು. ಅನ್ಯಾಯದ ವಿರುದ್ಧ ಪುಟಿದೇಳುವ ಉದ್ದೇಶ ನಮ್ಮದು. ಸ್ವಾರ್ಥವನ್ನು ಬದಿಗಿಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಂದಾಗಿರುವುದು ಅಗತ್ಯ ಎಂದರು.

ಜಿಲ್ಲಾಧ್ಯಕ್ಷ ಪರಮೇಶ್ವರ ಮಾತನಾಡಿ, ಸೊರಬ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಸದ್ದುದೇಶದಿಂದ ಆರಂಭವಾಗಿದೆ. ಸಮಾಜದ ಹಿತಕಾಯುವ ಕೆಲಸಗಳನ್ನು ಮಾಡಿಕೊಂಡು ಹೋಗಲು ಇಚ್ಛಾಶಕ್ತಿ ಹೊಂದಲಾಗಿದೆ ಎಂದು ತಿಳಿಸಿದರು.

ತಾಲೂಕು ಪ್ರಧಾನ ಕಾರ್ಯರ್ಶಿ ಕೆ.ಪಿ.ಶ್ರೀಧರ, ಸಂಚಾಲಕ ಎಸ್.ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಭರತ್ ಸ್ವಾಮಿ, ಆನವಟ್ಟಿ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಉಪಾಧ್ಯಕ್ಷ ಎ.ಕೆ.ಲಿಂಗರಾಜ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಶಿವಯೋಗಿ, ರೋಹಿತ್, ಜಡೆ ಘಟಕದ ಅಧ್ಯಕ್ಷ ರಾಜಪ್ಪ, ಯಲ್ಲಪ್ಪ, ಎಲ್.ಕೇಶವ, ವಿರೂಪಾಕ್ಷಪ್ಪ ಇದ್ದರು.