ಹಾಸನ: ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸುವುದರ ಜೊತೆಗೆ ಶಿಷ್ಠಾಚಾರ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ರಚನೆಯಾಗಿರುವ ಉಪ ಸಮಿತಿಗಳು ತಮ್ಮ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಲು ಹಾಗೂ ವಿದ್ಯುತ್ ದೀಪಾಲಂಕಾರವನ್ನ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಆಯಾ ಇಲಾಖೆಯವರು ಸಿಂಗರಿಸಲು ಕ್ರಮವಹಿಸಲು ತಿಳಿಸಿದರು.
ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಪತ್ರಿಕಾ ಕ್ಷೇತ್ರ ಹಾಗೂ ಗ್ರಾಮೀಣ ಕಲೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರತಿಭಾವಂತವರನ್ನು ಹಾಗೂ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ 3 ವ್ಯಕ್ತಿಗಳನ್ನು ಕನ್ನಡ ರಾಜ್ಯೋತ್ಸವದ ದಿನದಂದು ಸನ್ಮಾನಿಸಲು ತಿಳಿಸಿದರು. ಸನ್ಮಾನಿತರಿಗೆ ಗುಣಮಟ್ಟದ ನೆನೆಪಿನ ಕಾಣಿಕೆ ನೀಡಲು ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಕರ್ಷಕ ಪೆರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷನೀಯವಾಗಿ ಮೂಡಿಬರಲು ಅಗತ್ಯ ತಾಲಿಮು ನಡೆಸಲು ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅದ್ಬುತವಾಗಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಕಲಕುವಂತಿತ್ತು. ಕಾರ್ಯಕ್ರಮದ ಯಸ್ವಿಗಾಗಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಜಿಲ್ಲಾಧಿಕಾರಿ ತಿಳಿಸಿದರಲ್ಲದೆ, ರಾಜ್ಯೋತ್ಸವ ಸಂದರ್ಭದಲ್ಲೂ ಉತ್ತಮ ಕಾರ್ಯಕ್ರಮವನ್ನೂ ಆಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗೆ ತಿಸಿದರಲ್ಲದೆ, ಅಂದು ಸಂಜೆ ಕಲಾ ಭವನದಲ್ಲಿ ಗುಣ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ರಾಜ್ಯೋತ್ಸವ ಸಂದೇಶಕ್ಕಾಗಿ ಎಲ್ಲಾ ಅಭಿವೃದ್ಧಿ ಇಲಾಖೆ ಅವರು ತಮ್ಮ ಇಲಾಖೆಯಿಂದ ಸಾಧಿಸಿರುವ ಸರ್ಕಾರದ ಸಾಧನೆಗಳ ಕುರಿತು ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅ.12ರೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಹಾಡುಗಳನ್ನು ಆಡಿ ತಮ್ಮ ಹೆಸರು ಮತ್ತು ವಿಳಾಸವನ್ನೋಳಗೊಂಡಂತೆ ವಿಡಿಯೋ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರ ಮೊಬೈಲ್ ಸಂಖ್ಯೆ 7022434222ಗೆ ಅಕ್ಟೋಬರ್ 20 ರೊಳಗೆ ಕಳುಹಿಸುವಂತೆ ತಿಳಿಸಿದರು. ಇವುಗಳಲ್ಲಿ ಅತ್ಯುತ್ತಮ ಗಾಯನಕ್ಕೆ ಬಹುಮಾನ ನೀಡಲಾಗುವುದು. ಉತ್ತಮವಾದ ಹಾಡುಗಳ ವಿಡಿಯೋಗಳನ್ನು ಕಾರ್ಯಕ್ರಮದಲ್ಲಿ ಬಿತ್ತರಿಸಲಾಗುವುದು ಎಂದು ಡಿಸಿ ತಿಳಿಸಿದರು.
ವಿವಿಧ ಕಲಾತಂಡಗಳು ಸಾಹಿತ್ಯ ಭವನದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಜಾಗೃತಿ ಸಮಿತಿ ಸದಸ್ಯ ಬಿ.ಟಿ.ಮಾನವ ಹಾಗೂ ವಿವಿಧ ಇಲಾಖೆ ಅಧಿಕಾರಿ ಹಾಜರಿದ್ದರು.