ಹಿರೇಬಾಗೇವಾಡಿ: ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡಲು ಸಂವಿಧಾನಾತ್ಮಕವಾಗಿ ಕಾನೂನು ರಚಿಸಬೇಕಿದೆ ಎಂದು ಹಿರಿಯ ಸಾಹಿತಿ ಆಶಾ ಕಡಪಟ್ಟಿ ಒತ್ತಾಯ ಮಾಡಿದರು
ಸಮೀಪದ ಅರಳೀಕಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಅವರು ಮಾತನಾಡಿ, 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಇಂಗ್ಲಿಷ್ ವ್ಯಾಮೋಹದಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಕಳಿಸುತ್ತಿರುವುದು ಬೇಸರದ ಸಂಗತಿ. ಇದು ಮುಂದುವರಿದಲ್ಲಿ ಕನ್ನಡ ತನ್ನ ಅಸ್ಮಿತೆ ಕಳೆದುಕೊಳ್ಳುವಲ್ಲಿ ಸಂದೇಹವಿಲ್ಲ ಎಂದರು.
ಕನ್ನಡ ಸಾಹಿತ್ಯದ ಮೂಲ ಬೇರು ಜನಪದ ಸಾಹಿತ್ಯದಲ್ಲಿದೆ. ಅಕ್ಷರ ಕಲಿಯದ ಜನಪದ ಕಟ್ಟಿ ಹಾಡಿದ ಹಾಡುಗಳಲ್ಲಿ ಕನ್ನಡ ನಾಡು, ನುಡಿ, ಇತಿಹಾಸದ ಹೆಜ್ಜೆ ಗುರುತುಗಳು ಕಾಣ ಸಿಗುತ್ತವೆ. ಹೀಗಾಗಿ ಕನ್ನಡ ಸಾಹಿತ್ಯದ ಪ್ರಕಾರಗಳು ಬೆಳೆದಂತೆ ಜನಪದವೂ ಬೆಳೆದು ಮುಂದಿನ ಪೀಳಿಗೆಯನ್ನು ತಲುಪಬೇಕು. ದಾಸರು, ಶರಣರು, ಕವಿ, ಸಾಹಿತಿಗಳಿಂದ ಮೂಡಿ ಬಂದ ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕಿದೆ. ನಾಡು, ನುಡಿ, ಗಡಿ, ಜಲ ವಿಷಯಗಳ ಸಮಸ್ಯೆ ಬಂದಾಗ ಕನ್ನಡ ಹೋರಾಟಗಾರರೊಂದಿಗೆ ಎಲ್ಲರೂ ಸ್ಪಂದಿಸಬೇಕಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಒಂದು ಕಾಲಕ್ಕೆ ಇಡೀ ಮಹಾರಾಷ್ಟ್ರದ ಭೂಮಿ ಕನ್ನಡಮಯವಾಗಿತ್ತು. ಅಲ್ಲಿ ಹಲವೆಡೆ ನಡೆಸಿದ ಭೂ ಉತ್ಖನನದಲ್ಲಿ ಕನ್ನಡದ ಶಿಲಾ ಶಾಸನಗಳು ದೊರೆತಿವೆ.
ಹಾಗಾಗಿ, ಮಹಾರಾಷ್ಟ್ರ ಹುಟ್ಟಿದ್ದೇ ಕನ್ನಡ ನೆಲದಿಂದ. ಹೀಗಾಗಿ ಮರಾಠಿಗರು ಮತ್ತು ಕನ್ನಡಿಗರಿಗೆ ತಾಯಿ ಮಕ್ಕಳ ಸಂಬಂಧವಿದೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲ ಕೂಡ ಕರ್ನಾಟಕ. ಆದ್ದರಿಂದ ಎಲ್ಲರೂ ಒಂದಾಗಿ ಬಾಳಬೇಕಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಯಾವೊಬ್ಬ ಚುನಾಯಿತ ಪ್ರತಿನಿಧಿಗಳೂ ಭಾಗಿಯಾಗದ ಕಾರಣ ಕಸಾಪ ಸದಸ್ಯರು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಹಂಜಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಅರಳೀಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯರು, ನಾಂದೇಡದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರವ್ವ ಕಟ್ಟಿಮನಿ, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಸಾದಪ್ಪ ದಾಸಪ್ಪನವರ, ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪೂರ, ಬಿ.ಜಿ.ವಾಲಿಇಟಗಿ, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಬಸನಗೌಡ ಪಾಟೀಲ, ರಶ್ಮಿ ಜಕಾತಿ ಇದ್ದರು.
ಭುವನೇಶ್ವರಿ ದೇವಿಯ ಪೂಜೆ ಮತ್ತು ಮೆರವಣಿಗೆಗೆ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಚಾಲನೆ ನೀಡಿದರು. ಹಲಕರ್ಣಿ ಮಠದ ದ್ವಾರಬಾಗಿಲಿನಿಂದ ಸಿಂಗರಿಸಿದ ಸಾರೋಟದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಆಶಾ ಕಡಪಟ್ಟಿ ಅವರ ಮೆರವಣಿಗೆ ಆರಂಭವಾಯಿತು. ಅರಳೀಕಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಾರಿಯುದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಕನ್ನಡ ಬಾವುಟ ಹಿಡಿದ ಶಾಲಾ ಮಕ್ಕಳು, ಡೊಳ್ಳು ವಾದ್ಯದೊಂದಿಗೆ ವೇದಿಕೆಗೆ ಕರೆತರಲಾಯಿತು. ಗ್ರಾಮದ ಮಹಿಳೆಯರು, ಸುಮಂಗಲೆಯರು ದಾರಿಯುದ್ದಕ್ಕೂ ನೀರು ಸುರಿದು ಅತಿಥಿಗಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಅದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ರಾಷ್ಟ್ರಧ್ವಜ, ಪರಿಷತ್ ಧ್ವಜ ಮತ್ತು ನಾಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲೂಕು ಅಧ್ಯಕ್ಷ ಸುರೇಶ ಹಂಜಿ ಮತ್ತು ನಿವೃತ್ತ ಸೇನಾಧಿಕಾರಿ ಬಸವರಾಜ ವಣ್ಣೂರ ನೆರವೇರಿಸಿದರು.