ಬೀಳಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ. 
ಜಿಲ್ಲೆ

ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬೇಡಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಜಿಲ್ಲೆಯ ಬೀಳಗಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ೧೦ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಭಾನುವಾರ ಸಮಾರೋಪಗೊಂಡಿತು, ಪರಿಷತ್ತಿನ ಕಾರ್ಯಕಾರಣಿಯಲ್ಲಿ ಪ್ರಮುಖ ಹತ್ತು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

೧ ರಿಂದ ೫ ನೆಯ ತರಗತಿ ವರೆಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣವನ್ನು ನೀಡಬೇಕು ಹಾಗೂ ಸಂಖ್ಯಾ ಕೊರತೆಯಿರುವ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚದಂತೆ ನಿರ್ಧಾರ ತೆಗೆದುಕೊಳ್ಳಬೇಕು. ಬಯಲಾಟ, ಪಾರಿಜಾತ ಮೊದಲಾದ ಜನಪದ ಕಲೆಗಳನ್ನು ಪುನರುಜ್ಜೀವನಗೊಳಿಸಿ, ಕಲಾವಿದರನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಜಾನಪದ ಮತ್ತು ನಾಟಕ ಅಕಾಡೆಮಿಗಳನ್ನು ಬಾಗಲಕೋಟೆ ಜಿಲ್ಲೆಗೆ ವರ್ಗಾಯಿಸಬೇಕು. ಚಾಲುಕ್ಯ ಉತ್ಸವಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಿ ರಾಷ್ಟ್ರೀಯ ಚಾಲುಕ್ಯ ಉತ್ಸವ ಎಂದು ನಾಮಕರಣ ಮಾಡಿ,ಪ್ರತಿ ವರ್ಷವು ಆಚರಿಸಬೇಕು. ನಾಡಿನ ಹಬ್ಬ ರನ್ನ ವೈಭವಕ್ಕೆ ಮರುಚಾಲನೆ ನೀಡಬೇಕು.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಾಧಿತರಾಗಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಜೀವನೋಪಾಯಕ್ಕಾಗಿ ಸ್ಥಳೀಯ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ನೀಡಬೇಕು. ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ, ವಸತಿ ಶಾಲೆಗಳನ್ನು ಆರಂಭಿಸಬೇಕು. ಎಲ್ಲಾ ಹಂತದ ಸರ್ಕಾರಿ ಉದ್ಯೊಗಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಹಾಗೂ ಸ್ವಂತ ಉದ್ಯೋಗ ಕೈಗೊಳ್ಳುವವರಿಗೆ ಅವರ ಕೌಶಲ್ಯಕ್ಕನುಗುಣವಾಗಿ ನಿವೇಶನ ಹಾಗೂ ಹಣಕಾಸಿನ ನೇರವು ಕೊಡಬೇಕು.

ಆಲಮಟ್ಟಿ ಹಿನ್ನೀರಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಹಾಗೂ ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು. ಕರ್ನಾಟಕ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಪುನಶ್ಚೇತನಗೋಳಿಸಿ, ಮಕ್ಕಳನ್ನ ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಕರ್ನಾಟಕ ಗಡಿಗಳಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶ, ತಮಿಳನಾಡು ಮೊದಲಾದ ರಾಜ್ಯಗಳಲ್ಲಿ ಕನ್ನಡ ಕಲಿಯ ಬಯಸುವ ಮಕ್ಕಳನ್ನು ಪ್ರೋತ್ಸಾಹಿಸುವ ವಿಶೇಷ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ನೀರಾವರಿ ವಂಚಿತ ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆ, ಹುನಗುಂದ ಮತ್ತು ಇಳಕಲ್ಲ ತಾಲೂಕುಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು, ಬೀಳಗಿ ಪಟ್ಟಣದ ಕಂದಗಲ್ಲ ಹನುಮಂತರಾಯರ ರಂಗ ಮಂದಿರ ಶೀಘ್ರ ಪೂರ್ಣಗೊಳಿಸಬೇಕು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಭವನಗಳನ್ನು ನಿರ್ಮಿಸಲು ನಿವೇಶನಗಳನ್ನು ಒದಗಿಸಬೇಕು.