ಜಿಲ್ಲೆ

ಕನ್ನಡ ಮಾಧ್ಯಮ ಕುರಿತು ಬೇಡ ತಾತ್ಸಾರ- ಪಿ.ಎಲ್.ಶೇಪೂರ್

ದಾವಣಗೆರೆ:ಮಕ್ಕಳಿಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ಕಲ್ಪಿಸುವ ಮನೋಭಾವ ಪಾಲಕರಲ್ಲಿ ಬರಬೇಕು. ಆಗ ಕನ್ನಡ ಶಾಲೆಗಳಿಗೆ ಜೀವ ಬರಲಿದೆ ಎಂದುನಿವೃತ್ತ ಕನ್ನಡ ಶಿಕ್ಷಕ ಪಾಂಡುರಂಗ ಎಲ್. ಶೇಪೂರ್ ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿನೋಬನಗರದ ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಯ 1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೆನಪಿನ ಬುತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

1978 ರಲ್ಲಿ ಡಿಇಎ ಶಾಲೆ ಆರಂಭವಾದಾಗ ಕಷ್ಟಪಟ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಪರಿಸ್ಥಿತಿ ಇತ್ತು. ಈಗಲೂ ಮತ್ತದೇ ಕಾಲ ಮರುಕಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. 2024ನೇ ವರ್ಷಕ್ಕೆ 50ನೇ ವರ್ಷ ತುಂಬಲಿದ್ದು, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಿಸಬೇಕು ಎಂದು ಸಲಹೆ ನೀಡಿದರು.

ಮಾತೃಭಾಷೆಯಲ್ಲಿ ಎಂಬಿಬಿಎಸ್ ಶಿಕ್ಷಣ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಅದು ಜಾರಿಯಾದಲ್ಲಿ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಗುರುಗಳನ್ನು ಮೀರಿಸಿ ಬೆಳೆಯಬೇಕಿದೆ. ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಟಿ.ನಾಗರಾಜ್ ಮಾತನಾಡಿ ತಾಯಿಯೇ ಮೊದಲ ಗುರು. ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಪ್ರತಿಯೊಬ್ಬರೂ ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.

ಸಮಾಜ ವಿಜ್ಞಾನ ಶಿಕ್ಷಕ ಜಿ.ಎಸ್.ಮಲ್ಲಿನಾಥ್ ಮಾತನಾಡಿ ಶಿಕ್ಷಣದ ಜತೆಗೆ ಬದುಕಿನಲ್ಲಿ ಭರವಸೆ ನೀಡಿದ ಪಾಲಕರ ಬಗ್ಗೆ ಇಂದಿನ ಯುವ ಜನರಲ್ಲಿ ತಾತ್ಸಾರ ಮನೋಭಾವ ಬೆಳೆಯುತ್ತಿದ್ದು ವೃದ್ಧಾಶ್ರಮ ಹೆಚ್ಚುತ್ತಿವೆ. ಇದು ತಪ್ಬಬೇಕು ಎಂದರು.

ಗಣಿತ ಶಿಕ್ಷಕ ಜಿ.ಬಸವರಾಜಪ್ಪ ಮಾತನಾಡಿ ವೃತ್ತಿ ನಿಷ್ಠೆ ಮುಖ್ಯ. ಶಿಕ್ಷಕರ ಜತೆ ಎಲ್ಲ ವೃತ್ತಿ ಬಾಂಧವರ ಪರಿಶ್ರಮದಿಂದ ಉತ್ತಮ ವಿದ್ಯಾರ್ಥಿಗಳ ಫಸಲು ಕಾಣಬಹುದು ಎಂದರು. ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಎಚ್.ವೈ.ರಾಮರಾವ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಕೆ.ಪಿ.ಬಸವರಾಜಪ್ಪ, ಎ.ಮಾನಪ್ಪ, ಎ.ಕೊಟ್ರಮ್ಮ ಹಾಗೂ ದಿ.ಎಸ್.ಎಂ.ಜೆ.ಮಹೇಶ್ವರಯ್ಯನವರ ಪತ್ನಿ ಈಶ್ವರಮ್ಮ, ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ನಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ಸುನಿಲ್, ಕೆ.ಆರ್.ಆನಂದ, ಜಿ.ಎನ್. ಶ್ಯಾಮ್, ಷಡಾಕ್ಷರಿ, ಸಂಜೀವ್, ಎನ್.ಎಂ.ಪ್ರಭು, ವಾಣಿ, ಸುಮಂಗಳಾ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರಿದ್ದರು.

---