ಜಿಲ್ಲೆ

ಕನ್ನಡ ಭಾಷೆಯನ್ನು ಹೆತ್ತ ತಾಯಿ ಸಮಾನ:ಓಂಕಾರ ಪ್ರಿಯ ಬಾಗೇಪಲ್ಲಿ

ಹಾಸನ: ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಹೆತ್ತ ತಾಯಿ ಸಮಾನವಾಗಿ ಕಾಣಬೇಕು ಎಂದು ಕನ್ನಡ ಸಂಸ್ಕೃತಿ ಸೇವಾಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರ ಪ್ರಿಯ ಬಾಗೇಪಲ್ಲಿ ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಇತ್ತೀಚೆಗೆ ನಡೆದ ಕನ್ನಡ ಪದ ಸಂಪತ್ತು ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಪನಿಷತ್ತುಗಳೇ ಭಾರತೀಯ ಸಾರವಾಗಿದ್ದು, ತಂದೆ ತಾಯಿಗಳಿಂದ, ಗುರುಗಳಿಂದ, ಸ್ವತಃ ತಮ್ಮಂದಿಲೇ ಒಳ್ಳೆಯದು ಬಂದರು ಅದನ್ನು ಹಂಚಬೇಕು ಎಂದು ಉಪನಿಷತ್ತು ಹೇಳುತ್ತದೆ. ಭಾಷೆ ಒಂದು ಮಾತಲ್ಲ ಅದು ಸ್ವತ್ತಾಗಿ ಮುತ್ತಾಗಿ ಬಿತ್ತುವಂತಹದ್ದು, ಸಮಾಜವನ್ನು ಸಂತೃಷ್ಠಿಯಾಗಿ ಇಡುವಂತಹದ್ದಾಗಿದೆ. ವಿದ್ಯಾರ್ಥಿಗಳು ಗಮನವಿಟ್ಟು, ಶ್ರದ್ಧೆಯಿಂದ, ಮಾತುಬಿಟ್ಟು ಗುರುಗಳು ಮಾಡುವ ಪಾಠ ಪ್ರವಚನವನ್ನು ಕೇಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಸಾಧಕನಿಗೆ ಎಷ್ಟು ಸಾಧನೆ ಮಾಡಿದರೂ ಅದು ನೀರ ಮೇಲಿನ ಗುಳ್ಳೆ ಇದ್ದಂತೆ, ಸಾಧನೆ ಎಂಬುವುದಕ್ಕೆ ಕೊನೆ ಇಲ್ಲ. ಯಾವುದೇ ಒಂದು ಜೀವಂತ ಭಾಷೆ ಯಾವುದೇ ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಬಳಸಿಕೊಂಡು ಅದು ಇನ್ನು ಹೆಮ್ಮರವಾಗಿ ಬೆಳೆಯುತ್ತದೆ. ಅಂತಹ ಶಕ್ತಿ ನಮ್ಮ ಮಾತೃ ಭಾಷೆಯಿಂದ ಕನ್ನಡಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಉಪನ್ಯಾಸಕರಾದ ಎಸ್. ಸುರೇಶ್, ಜಿ.ಎಂ. ಕಾಂತರಾಜು, ಎಚ್.ಡಿ. ಪೂರ್ಣಿಮಾ, ಬಿ. ಪದ್ಮಾವತಿ ಹಾಗೂ ಇತರರು ಇದ್ದರು.