ಚನ್ನರಾಯಪಟ್ಟಣ: ನಾಡು-ನುಡಿ, ನೆಲ-ಜಲ ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಒಗ್ಗೂಡಬೇಕು ಎಂದು ತಹಸೀಲ್ದಾರ್ ಬಿ.ಎಂ.ಗೋವಿಂದರಾಜು ಹೇಳಿದರು.
ಪಟ್ಟಣದ ನವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪುರಸಭಾ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಈ ಗಾಯನದ ಮೂಲಕ ನಮ್ಮ ರಾಜ್ಯದ ಇತಿಹಾಸ, ಸಂಸ್ಕೃತಿ ಹಾಗೂ ಮಹನೀಯರ ಸಾಧನೆಗಳನ್ನು ನೆನಪಿಗೆ ತರವಂತಹದು. ಕನ್ನಡವನ್ನು ಉಳಿಸುವ ಹಾಗೂ ಗೌರವಿಸುವ ಪ್ರಯತ್ನ ನಮ್ಮದಾಗಬೇಕು. ಕನ್ನಡ ನಾಡಿಗೆ ಕೊಡುಗೆ ನೀಡಿರುವ ಸಾಹಿತಿಗಳು ಮತ್ತು ಕವಿಗಳನ್ನು ಸ್ಮರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕೇಸರಿ-ಕೆಂಪು ಉಡುಗೆ ಧರಿಸಿದ್ದು ಕನ್ನಡ ಬಾವುಟ ಹಿಡಿದು ಹಾಡಿ ರಂಜಿಸಿದರು. ಈ ವಿಶಿ?್ಟ ಕಾರ್ಯಕ್ರಮದಲ್ಲಿ ನಾಡಗೀತೆ ಜತೆಗೆ ಉದಯವಾಗಲಿ ನಮ್ಮ ಚೆಲುವ ನಾಡು, ಕನ್ನಡ ಡಿಂಡಿಮ, ಹಚ್ಚೆವು ಕನ್ನಡದ ದೀಪ, ವಿಶ್ವ ವಿನೂತನ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿದರು.
ನವೋದಯ ಶಾಲಾ ವಿದ್ಯಾರ್ಥಿಗಳು, ನೂರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರು ಸಹ ಆರು ಗೀತೆಗೆ ದ್ವನಿಗೂಡಿಸಿದರು. ಗೀತೆಗಳನ್ನು ಹಾಡುವ ಮೂಲಕ ಕನ್ನಡ ಭಾಷೆಗೆ ನಮನ ಸಲ್ಲಿಸಲಾಯಿತು. ಸಹಸ್ರಾರು ವಿಧ್ಯಾರ್ಥಿಗಳು ಹಾಗೂ ನಾಗರಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಂಕಲ್ಪ ವಿಧಿ ಬೋಧನೆಯನ್ನು ನವೋದಯ ವಿದ್ಯಾಲಯ ಶಿಕ್ಷಕರು ಬೋಧಿಸಿದರು. ವೇದಿಕೆ ಮೇಲಿದ್ದ ಗಣ್ಯರು ಹಾಗೂ ಮುಂದಿದ್ದ ವಿಧ್ಯಾರ್ಥಿಗಳು ಕೈ ಮುಂದೆ ಮಾಡಿ ನಾಡಿನ ಪ್ರೇಮದ ಸಂಕಲ್ಪ ಕೈಗೊಂಡರು.
ಪುರಸಭಾ ಮುಖ್ಯಾಧಿಕಾರಿ ಎಚ್.ಟಿ.ಕೃಷ್ಣಮೂರ್ತಿ, ಬಿಇಒ ಸೋಮನಾಥ್, ಬಿಆರ್‌ಸಿ ಅನಿಲ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಹೋಬಳಿ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಪ್ರಮುಖರಾದ ಯಶೋಧ ಜೈನ್, ಶಂಕರ್, ದಿಂಡಗೂರು ಗೋವಿಂದರಾಜು, ಮನೋಹರ್, ಮಟ್ಟನವಿಲೆ ಮಂಜು, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆದಿಶೇಶ್ ಕುಮಾರ್, ನವೀನ್ ಕುಮಾರ್, ಕಂದಾಯ ನಿರೀಕ್ಷಕ ಎಂ.ಆರ್.ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನವೋದಯ ಶಾಲಾ ಶಿಕ್ಷಕ ವೃಂದ, ವಿಧ್ಯಾರ್ಥಿಗಳು, ಅಧಿಕಾರಿ ವರ್ಗ ಹಾಗೂ ಇತರರು ಇದ್ದರು.