ಬೇಲೂರು: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜು ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಚನ್ನಕೇಶವಸ್ವಾಮಿ ಆಡಳಿತದ ಸಹಯೋಗದಲ್ಲಿ ಶುಕ್ರವಾರ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ಆಯೋಜಿಸಿದ್ದ ಕೋಟಿ ಕಂಠ ಗಾಯನದಲ್ಲಿ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಕವಿ ವಾಣಿಯಂತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದು ಇಂದಿಗೆ ಪ್ರಸ್ತುತವಾಗಿದೆ. ಇಡೀ ಪ್ರಪಂಚದಲ್ಲಿ ಕನ್ನಡ ಭಾಷೆಗೆ ವಿಶೇಷವಾದ ಮಾನ್ಯತೆ ಇದ್ದು ಅದರಲ್ಲೂ ನಮ್ಮ ದ್ರಾವಿಡ ಭಾಷೆಯಲ್ಲೇ ಸುಂದರವಾದ ಬರಹಗಳಿರುವ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನವಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಗೌರವಿಸಬೇಕು ಎಂದರು.
ಕೋಟಿ ಗಾಯನದಲ್ಲಿ ಕುವೆಂಪು ರಚಿಸಿದ ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ, ಹಾಗೂ ಡಾ.ರಾಜ್‌ಕುಮಾರ್ ಹಾಡಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತ ಗಾಯನವನ್ನು 5000 ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮತ್ತು ಸಾರ್ವಜನಿಕರು ದೇಗುಲ ಮುಂಭಾಗದಲ್ಲಿ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮ ಮುಗಿದ ನಂತರ ಡಾ.ರಾಜ್‌ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗೆ ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಶಾಲೆಗಳ ಶಿಕ್ಷಕರು ಸೇರಿದಂತೆ ಇತರರು ನೃತ್ಯ ಮಾಡಿದರು.
ತಹಸೀಲ್ದಾರ್ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ರಾಜೇಗೌಡ, ಸಾಂಸ್ಕೃತಿಕ ರಾಯಭಾರಿ ಜಾವಗಲ್ ಪ್ರಸನ್ನ, ರಾಜಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ಕರವೇ ಚಂದ್ರಶೇಖರ್, ಮಾ.ಶಿವಮೂರ್ತಿ, ಬಿ.ಎಂ.ಸಂತೋಷ್, ಸೌಮ್ಯಾ, ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಇನ್ಸ್‌ಪೆಕ್ಟರ್ ರವಿಕಿರಣ್, ಪಿಎಸ್‌ಐಗಳಾದ ಎಸ್.ಜಿ.ಪಾಟೀಲ್, ಸುರೇಶ್ ಇತರರಿದ್ದರು.