ಜಿಲ್ಲೆ

ಕನ್ನಡ ಭಾಷೆ ಸುಲಭವಾಗಿ ಕಲಿಯಬಹುದು

ಬಳ್ಳಾರಿ : ದೇಶ ಹಾಗೂ ವಿದೇಶದ ವಿವಿಧ ಭಾಷೆಗಳಿಗಿಂತ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್, ವಿಎಸ್‌ಕೆ ವಿವಿ, ಕನ್ನಡ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ದಿ. ಜಿ. ರುಕ್ಮಿಣಮ್ಮ ಮತ್ತು ದಿ. ಜಿ. ಚೆಂಗಾರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ ಗುರುವಾರ ನಡೆದ ಕನ್ನಡ ಕವಿಗಳು ಕಂಡ ಹಂಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಂಪಿಯ ಕಲ್ಲು ಕಲ್ಲಿನಲ್ಲಿ ಕನ್ನಡ ಸೊಬಗನ್ನು ಇಂದಿಗೂ ಕಾಣಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವ ಕುರಿತು ಕಾಲಜ್ಞಾನದಲ್ಲಿ ಮೊದಲೇ ಉಲ್ಲೇಖಿಸಲಾಗಿತ್ತು. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನು ಸ್ವತಃ ಒಬ್ಬ ಕವಿಯಾಗಿದ್ದು, ಅಮುಕ್ತ ಮೌಲ್ಯ ಕೃತಿಯನ್ನು ರಚಿಸಿದ್ದನ್ನು ಸ್ಮರಿಸಿದರು. ತಿಮ್ಮರಸ, ತೆನಾಲಿ ರಾಮಕೃಷ್ಣ, ಅಲ್ಲಾಸಾನಿ ಪೆದ್ದಣ್ಣ ಸೇರಿದಂತೆ ಅಷ್ಟ ಕವಿಗಳನ್ನು ಹೊಂದಿರುವ ಸಾಮ್ರಾಜ್ಯವಾಗಿತ್ತು ಎಂದರು.
ವಿವಿ ಕುಲಪತಿ ಪ್ರೊ. ತಿಪ್ಪೇರುದ್ರಪ್ಪ ಜೆ. ಮಾತನಾಡಿ, ವಿಜಯನಗರ ಸಾಮ್ರಾಜ್ಯದಲ್ಲಿನ ಅಷ್ಟ ಕವಿಗಳನ್ನು ಸ್ಮರಿಸಿ, ಕನ್ನಡ ಸಾಹಿತ್ಯ ಕುರಿತಾದ ಕಾರ್ಯಕ್ರಮಗಳು ವಿವಿಗಾಗಿ ಮೀಸಲಿಡಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಗಾದೆಪ್ಪ , ಕನ್ನಡ ಅಧ್ಯಯನ ಮುಖ್ಯಸ್ಥ ಪ್ರೊ. ರಾಬರ್ಟ ಜೋಸೆಫ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು.