ಮೈಸೂರು: ಕನ್ನಡ ಭಾಷೆ ಅನೇಕ ಲೇಖಕರನ್ನು ಸೃಷ್ಟಿ ಮಾಡಿದೆ. ಆದರೆ, ಓದುಗರನ್ನು ಸೃಷ್ಟಿ ಮಾಡಲಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.
ಸಂಸ್ಕೃತಿ ಬುಕ್ ಏಜೆನ್ಸೀಸ್ ವತಿಯಿಂದ ಕುವೆಂಪುನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಪುಸ್ತಕ ಪ್ರದರ್ಶನ ಮಳಿಗೆಯ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಕನ್ನಡ ನಾಡು-ನುಡಿಗೆ ಗೌರವ ತಂದುಕೊಡುವಂತಹ ಅನೇಕ ಮಹನೀಯ ಲೇಖಕರು ಸೃಷ್ಟಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಓದುಗರ ಸಂಖ್ಯೆ ವೃದ್ಧಿಯಾಗಿಲ್ಲ. ಇವರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ ಎಂದರು.
ಓದುಗರ ಕೊರತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಈಗಲಾದರೂ ಕೆಲಸಗಳು ಆಗಬೇಕು. ಇದರಿಂದ ಉತ್ತಮ ಸಾಂಸ್ಕೃತಿಕ, ಸಾಹಿತ್ಯ ವಲಯ ಸೃಷ್ಟಿಯಾಗಲಿದೆ ಎಂದರು.
ಪುಸ್ತಕ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತಿದೆ. ಮನುಷ್ಯ ತನ್ನ ಅಹಂಕಾರ ಕಳೆದುಕೊಳ್ಳಲಾದರೂ ಪುಸ್ತಕದಂಗಡಿ, ಗ್ರಂಥಾಲಯಕ್ಕೆ ಹೋಗಬೇಕು. ಅಲ್ಲಿಗೆ ಹೋದಾಗಲೇ ಅರಿವಿಗೆ ಬರುತ್ತದೆ ಎಷ್ಟೊಂದು ವೈವಿಧ್ಯಮ ಪುಸ್ತಕಗಳು ಬಂದಿವೆ ಎಂಬುದು. ಇಷ್ಟು ಕೃತಿಗಳನ್ನು ಓದಲು ಆಗಿಲ್ಲ. ನನಗೆ ಬಹಳಷ್ಟು ವಿಷಯ ಗೊತ್ತಿಲ್ಲ ಎಂಬ ಸಂಗತಿಯೂ ಅರಿವಿಗೆ ಬರುತ್ತದೆ ಎಂದರು.
ತಂತ್ರಜ್ಞಾನ ಯುಗದಲ್ಲಿ ಪುಸ್ತಕದಂಗಡಿ ಜನಪ್ರಿಯವಾಗಬೇಕು. ಪುಸ್ತಕಗಳನ್ನು ಜನರು ಹೆಚ್ಚು ಕೊಂಡು ಓದಬೇಕು. ಇದರಿಂದ ಸಮಾಜಕ್ಕೆ, ಓದುಗರಿಗೆ, ಪ್ರಕಾಶಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಾಹಿತಿ ಎಸ್.ಎಲ್. ಭೈರಪ್ಪ ಅವರ ಪತ್ನಿ ಸರಸ್ವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯವಿಠ್ಠಲ ವಿದ್ಯಾಸಂಸ್ಥೆಯ ಅಧ್ಯಕ್ಷ ವಾಸುದೇವ ಭಟ್ ನೂತನ ಮಳಿಗೆಯಲ್ಲಿ ಪ್ರಥಮ ಪುಸ್ತಕವನ್ನು ಖರೀದಿ ಮಾಡಿದರು.
ಹಿರಿಯ ವಿದ್ವಾಂಸ ಡಾ.ಪ್ರಧಾನ ಗುರುದತ್ತ, ಪುಸ್ತಕ ಮಳಿಗೆಯ ಮಾಲೀಕ ಸಂಸ್ಕೃತಿ ಸುಬ್ರಹ್ಮಣ್ಯ ಇನ್ನಿತರರಿದ್ದರು.