ಜಿಲ್ಲೆ

ಕನ್ನಡ ಭವನಕ್ಕೆ ₹ 2ಕೋಟಿ ಮಂಜೂರಿ

ಬೀದರ್: ನಗರದಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಕನ್ನಡ ಭವನಕ್ಕಾಗಿ ಸರ್ಕಾರ 2 ಕೋಟಿ ರೂ. ಮಂಜೂರಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರ ಬೀದರ್ ನಲ್ಲಿ ಕನ್ನಡ ಭವನ ನಿರ್ಮಿಸಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ತಾವು ಸಚಿವರಾದ ನಂತರ ಈ ವಿಷಯ ಆದ್ಯತೆಯಾಗಿ ಸ್ವೀಕರಿಸಿ, ಸಂಬಂಧಿಸಿದ ಸಚಿವರೊಂದಿಗೆ ನಿರಂತರ ಸಂಪರ್ಕ ಮಾಡಿ ಭವನ ನಿರ್ಮಾಣ ಅಗತ್ಯತೆ ಬಗ್ಗೆ ಒತ್ತಡ ಹಾಕುತ್ತಿದ್ದೆ. ಹೀಗಾಗಿ ಇದಕ್ಕೆ ಅನುದಾನ ಲಭಿಸುವ ಜತೆಗೆ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ್ದ ಕಾಮಗಾರಿ ಆರಂಭದ ವಿಷಯವೂ ಇತ್ಯರ್ಥಗೊಂಡಿದೆ ಎಂದು ಶುಕ್ರವಾರ ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜಿಲ್ಲಾಡಳಿತ ಕನ್ನಡ ಭವನಕ್ಕಾಗಿ ನಗರದ ಚಿಕ್ಪೇಟ ಹತ್ತಿರ 1 ಎಕರೆ ಜಮೀನು ಮಂಜೂರಿ ಮಾಡಿದೆ. ಮೊದಲ ಕಂತಿನ ಅನುದಾನ 1 ಕೋಟಿ ರೂ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆ ಮಾಡಲು ಆದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನಸಿನ ಕೂಸಾದ ಕನ್ನಡ ಭವನಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರ ಕನ್ನಡ ರಕ್ಷಣೆಗೆ ಬದ್ಧವಾಗಿದೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ, ರಂಗಮಂದಿರಕ್ಕೆ ಡಾ. ಚನ್ನಬಸವ ಪಟ್ಟದೇವರು ನಾಮಕರಣ, ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಸೇರಿದಂತೆ ಕನ್ನಡಪರವಾದಂತಹ ಎಲ್ಲ ಕೆಲಸಗಳು ತ್ವರಿತಗತಿಯಲ್ಲಿ ಮಾಡುತ್ತಿದೆ ಎಂದಿದ್ದಾರೆ.

ಕನ್ನಡ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮಂಜೂರಿಗೊಳಿಸಿ ಕಾಮಗಾರಿ ಶೀಘ್ರ ಆರಂಭಿಸಲು ಮುಂದಾಗಿ ಕನ್ನಡಿಗರ ಬಹು ದಿನಗಳ ಕನಸು ನನಸು ಮಾಡಿರುವುದಕ್ಕೆ ಸಚಿವರಿಗೆ ಅಭಿನಂದಿಸುವುದಾಗಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದ್ದಾರೆ.

ಕಾಮಗಾರಿ ತ್ವರಿತ, ಗುಣಮಟ್ಟದಿಂದ ಕೂಡಿರಲು ಅಧಿಕಾರಿಗಳ ತಂಡವನ್ನು ರಚಿಸಿ, ಪ್ರತಿ ಹಂತದಲಲೂ ವೀಕ್ಷಣೆಯನ್ನು ಮಾಡಲು ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ