ಬೀದರ್: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ಭೂಮಿಪೂಜೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ನ.22ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಭೂಮಿಪೂಜೆ ನೆರವೇರಿಸುವರು. ಜಿಲ್ಲೆ ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಭಾಗವಹಿಸುವರು.
ನಗರದ ಗುರುದ್ವಾರ ಹತ್ತಿರದ ಚಿಕ್ ಪೇಟ ರಸ್ತೆ ಪಕ್ಕದ 1 ಎಕರೆ ಜಾಗದಲ್ಲಿ ಸುಸಜ್ಜಿತ ಭವ್ಯ ಭವನ ತಲೆ ಎತ್ತಲಿದೆ. ಜಿಲ್ಲಾ ಕಸಾಪ ಇದಕ್ಕೆ ಒಟ್ಟು 8 ಕೋಟಿ ರೂ. ಯೋಜನೆ ರೂಪಿಸಿದ್ದು, ಸುಂದರ ಭವನದ ನೀಲಿನಕ್ಷೆ ಸಿದ್ಧವಾಗಿದೆ. ಸರ್ಕಾರ ಭವನಕ್ಕೆ 2 ಕೋಟಿ ರೂ. ಅನುದಾನ ಒದಗಿಸಿದ್ದು, ಈಗಾಗಲೇ ಇದರಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿದೆ. ಹೀಗಾಗಿ ಭವನದ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ.
ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿ ಬೀದರ್ ಇದೆ. ಎರಡೂ ರಾಜ್ಯಗಳ ಭಾಷೆ ಪ್ರಭಾವದ ಮಧ್ಯೆಯೂ ಇಲ್ಲಿಯ ಜನ ಕನ್ನಡವನ್ನು ಉಳಿಸಿ, ಬೆಳೆಸಿದ್ದಾರೆ. ರಾಜ್ಯದ ಮುಕುಟವಾಗಿರುವ ಬೀದರ್ ಜಿಲ್ಲೆಗೆ ಇನ್ನಷ್ಟು ಮೆರುಗು ತುಂಬಲು ಜಿಲ್ಲಾ ಕೇಂದ್ರದಲ್ಲಿ ಭವ್ಯವಾದ ಕನ್ನಡ ಭವನ ನಿರ್ಮಾಣವಾಗುತ್ತಿರುವುದು ಸಂತಸ ಸಂಗತಿ. ಇಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗಲು ಭವನ ನಿರ್ಮಾಣವಾಗುತ್ತಿದೆ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಎಲ್ಲ ಸಮುದಾಯವನ್ನು ಒಳಗೊಂಡಿದೆ. ನಾಡು-ನುಡಿ, ನೆಲ-ಜಲ ಸೇರಿದಂತೆ ಕನ್ನಡಿಗರ ಸಾಂಸ್ಕೃತಿಕ ಬದುಕಿನ ಸಂವರ್ಧನೆಗಾಗಿ ಜನ್ಮ ತಳೆದು ನೂರು ವರ್ಷ ಪೂರೈಸಿ ಈಗ ಶತಮಾನೋತ್ಸವ ಆಚರಿಸಿಕೊಂಡಿದೆ. ಗಡಿ ಭಾಗ ಬೀದರ್ ಜಿಲ್ಲೆಯಲ್ಲಿಯೂ 50 ವರ್ಷಗಳಿಂದ ಪರಿಷತ್ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಸುವರ್ಣ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ವಿಳಂಬವಾದರೂ ಭವನ ನಿರ್ಮಾಣವಾಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ಭವನಕ್ಕೆ ಭೂಮಿ ಪೂಜೆ ಮಾಡುತ್ತಿರುವುದು ಚಾರಿತ್ರಿಕವೆನಿಸಲಿದೆ. ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬನ್ನಿ.| ಸುರೇಶ ಚನ್ನಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ