ಮೈಸೂರು: ಮೈಸೂರು ಅರಸರು ಕಲೆ, ಸಂಸ್ಕೃತಿ, ಸಾಹಿತ್ಯ, ಭಾಷೆಗೆ ಪ್ರೋತ್ಸಾಹ ನೀಡಿದ್ದರಿಂದಲೇ ಈ ಭಾಗದಲ್ಲಿ ಕನ್ನಡ ಬೆಳೆಯಲು ಸಹಕಾರಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶ್ಲಾಘಿಸಿದರು.
ನಗರದ ಗೋಕುಲಂನ ಕೃಷ್ಣ ಗಾನಸಭಾದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಜಯಚಾಮರಾಜ ಒಡೆಯರ್ ಅವರ 105ನೇ ಜನ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ರೀತಿಯ ಕಲೆಗಳು ಹಾಗೂ ಕಲಾವಿದರಿಗೆ ಆಶ್ರಯ ನೀಡಿದ ಮೈಸೂರು ಒಡೆಯರನ್ನು ಸ್ಮರಿಸುವುದು ಮುಖ್ಯವಾಗಿದೆ. ಅವರಿಂದಲೇ ಹಳೆ ಮೈಸೂರು ಭಾಗ ಸರ್ವ ರೀತಿಯಲ್ಲಿಯೂ ಅಭಿವೃದ್ಧಿ ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೃಷ ಗಾನಲೋಲನಾಗಿದ್ದು, ಸ್ವತಃ ಕೊಳಲು ಹಿಡಿದು ನುಡಿಸುತ್ತಿದ್ದರೆ ಪ್ರಕೃತಿಯೇ ಸ್ಪಂದನೆ ನೀಡುತ್ತಿತ್ತು. ಅಂತಹ ಕೃಷ್ಣನ ಸನ್ನಿದಾನದಲ್ಲಿ ಮೈಸೂರು ಒಡೆಯರ ಜಯಂತಿ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಶ್ರೀಕೃಷ್ಣ ಗಾನಸಭಾ ಅಧ್ಯಕ್ಷ ಬಿ.ಎಸ್.ಶ್ರೀಧರರಾಜೇ ಅರಸ್ ಮಾತನಾಡಿ, ಮೈಸೂರು ಅರಸರಿಂದಾಗಿ ಸಾಕಷ್ಟು ಅಭಿವೃದ್ಧಿಯಾಗಿ ರಾಜ್ಯ ಸುಭಿಕ್ಷವಾಗಿತ್ತು. ಹಾಗಾಗಿ ಅಂತಹ ಅರಸರ ಸ್ಮರಣೆ ಸದಾ ಆಗಬೇಕು. ಮುಂದಿನ ವರ್ಷ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿ ಫೌಂಡೇಶನ್ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಪ್ಪಡಿ ಮಠದ ವರ್ಚಸ್ವಿ ಸಿದ್ದಲಿಂಗ ರಾಜೇ ಅರಸ್ ಅವರು ದೇಣಿಗೆ ನೀಡುವುದಾಗಿ ತಳಿಸಿದ್ದು, ಅವರ ಹೆಸರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಇದೇ ವೇಳೆ ಶ್ರೀಜಯಚಾಮರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಗರಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಸರ್ಕಾರಿ ಆರ್ಯುವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಇತರರು ಇದ್ದರು. ಬಳಿಕ ವಿದ್ವಾನ್ ಎನ್.ಆರ್.ಪ್ರಶಾಂತ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.