ಜಿಲ್ಲೆ

ಕನ್ನಡ ಪರೀಕ್ಷೆಗೆ 200 ವಿದ್ಯಾರ್ಥಿಗಳು ಗೈರು

ಚಾಮರಾಜನಗರ: ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭವಾಗಿದ್ದು, ಮೊದಲನೇ ದಿನದ ಕನ್ನಡ ವಿಷಯ ಪರೀಕ್ಷೆಗೆ 200 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಕನ್ನಡ ವಿಷದ ಪರೀಕ್ಷೆಗೆ 6777 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 6577 ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಕನ್ನಡ ಪರೀಕ್ಷೆಗೆ ಹಾಜರಾಗಿದ್ದು, ಸುಮಾರು 200 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಜಿಲ್ಲೆಯ ಚಾಮರಾಜನಗರ 4, ಕೊಳ್ಳೇಗಾಲ 5, ಗುಂಡ್ಲುಪೇಟೆ 3 ಹಾಗೂ ಯಳಂದೂರು ಮತ್ತು ಹನೂರು 2 ಹಾಗೂ ರಾಮಾಪುರ 1 ಪರೀಕ್ಷಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ವಿವಿಧ ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಹಾಜರಿದ್ದ ವಿದ್ಯಾರ್ಥಿಗಳು, ಕೊನೆ ಹಂತದಲ್ಲಿ ಪುಸ್ತಕಗಳನ್ನು ಹಿಡಿದು ಓದುತ್ತಿದ್ದ ದೃಶ್ಯಗಳು ಕಂಡುಬಂದಿತು. ಹಲವಾರು ವಿದ್ಯಾರ್ಥಿಗಳು ತಮ್ಮ ಪಾಲಕರ ಜತೆ ಆಗಮಿಸಿದ್ದರು. ವಿದ್ಯಾರ್ಥಿಗಳು ತಮ್ಮ ಕೊಠಡಿಗಳಿಗೆ ತೆರಳಿ ಪರೀಕ್ಷೆ ಬರೆದರು. ದ್ವಿತೀಯ ಪಿಯುಸಿ ಪರೀಕ್ಷೆ ಅಂಗವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ವೆಬ್‌ಕಾಸ್ಟಿಂಗ್ ಮಾಡಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಹಾಗೂ ಇನ್ನಿತರೆ ಅಗತ್ಯ ಸೌಲಭ್ಯವನ್ನು ವ್ಯವಸ್ಥಿತವಾಗಿ ಒದಗಿಸಲಾಗಿತ್ತು.

2 ಜಾಗೃತದಳ ತಂಡಗಳು:

ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ 2 ಜಾಗೃತದಳದ ತಂಡವನ್ನು ರಚನೆ ಮಾಡಲಾಗಿತ್ತು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ಪರೀಕ್ಷಾ ಕೇಂದ್ರಗಳಿಗೆ ಒಂದು ತಂಡವನ್ನು ನಿಯೋಜನೆ ಮಾಡಲಾಗಿತ್ತು. ಯಳಂದೂರು ಮತ್ತು ಕೊಳ್ಳೇಗಾಲ ಪರೀಕ್ಷಾ ಕೇಂದ್ರಗಳಿಗೆ ಮತ್ತೊಂದು ತಂಡವನ್ನು ನಿಯೋಜನೆ ಮಾಡಲಾಗಿತ್ತು. ಅದರಂತೆ ಜಾಗೃತ ತಂಡಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಅವರು ಕೂಡ ಕೊಳ್ಳೇಗಾಲದ ಜೆಎಸ್‌ಎಸ್ ಕಾಲೇಜು ಮತ್ತು ನಿಸರ್ಗ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕನ್ನಡ ವಿಷಯದ ಪರೀಕ್ಷೆ ಸುಲಲಿತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.