ಜಿಲ್ಲೆ

ಕನ್ನಡ ಪರ ಹೋರಾಟಗಾರ ಟಿ.ಎ.ನಾರಾಯಣಗೌಡ ಬಂಧನ ಸರಿಯಾದ ಕ್ರಮವಲ್ಲ: ಡಾ.ಎಚ್.ಎಲ್ ಮಲ್ಲೇಶ್‌ಗೌಡ

ಹಾಸನ: ನಾಮ ಫಲಕಗಳ ವಿಚಾರವಾಗಿ ನಡೆದ ಪ್ರತಿಭಟನೆ ವೇಳೆ ಕನ್ನಡ ಪರ ಹೋರಾಟಗಾರ, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನ ಮಾಡಿ ಜೈಲಿಗೆ ಕಳಿಸಿರುವುದು ಸರಿಯಲ್ಲ. ಅವರನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶ್‌ಗೌಡ ಮನವಿ ಮಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಪರ ಹೋರಾಟ ಅತೀ ಅಗತ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಹೋರಾಟ ಮಾಡಿರುವ ನಾರಾಯಣಗೌಡ ಅವರನ್ನು ಬಿಡುಗಡೆ ಮಾಡಿ, ಸರ್ಕಾರದ ಹಂತದಲ್ಲೇ ಕನ್ನಡ ಭಾಷೆ ಪರವಾಗಿ ಕಟ್ಟುನಿಟ್ಟಿನ ಕಾನೂನು ರಚನೆ ಆಗಬೇಕು ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ನಾಡಿನಾದ್ಯಂತ ಕನ್ನಡ ನಾಮಫಲಕ ಅಳವಡಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ, ಯಾವುದೇ ಸರಕಾರಿ ಅಥವಾ ಖಾಸಗಿ ಸಂಘ ಸಂಸ್ಥೆಗಳಲ್ಲಿ ಶೇ.60 ರಷ್ಟು ಕನ್ನಡದಲ್ಲಿರುವ ನಾಮ ಫಲಕ ಕಡ್ಡಾಯ ಮಾಡಿರುವುದು ಕನ್ನಡ ಪರವಾದ ದಿಟ್ಟ ನಿಲುವು. ಇದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸಲೂ ಸರ್ಕಾರ ನಿರ್ಧರಿಸಿದೆ. ಇದು ರಾಜ್ಯಾದ್ಯಂತ ಕಟ್ಟು ನಿಟ್ಟಾಗಿ ಜಾರಿ ಆಗಬೇಕು. ಆದಷ್ಟು ಬೇಗ ಅನುಷ್ಠಾನಕ್ಕೆ ಬರಬೇಕು ಎಂದು ಆಗ್ರಹಿಸಿದರು.
ನ್ನಡ ಬಳಕೆ ಬಗ್ಗೆ ಸರ್ಕಾರದ ಆದೇಶವನ್ನು ಸುತ್ತೋಲೆ ರೂಪದಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಎಲ್ಲಾ ಸಂಘ,ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಇಡೀ ರಾಜ್ಯದಲ್ಲಿ ಯಾವುದೇ ಖಾಸಗಿ ಸಂಘ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಮಾಡದೇ ಇದ್ದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವ ನಿಯಮ ಸಹ ಜಾರಿ ಆಗಬೇಕು, ಹಾಗಿದ್ದಾಗ ಕನ್ನಡ ಭಾಷೆಯ ಉಳಿವು ಹಾಗೂ ರಕ್ಷಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ನೀಡಿ, ನಾಮಫಲಕ ಅಳವಡಿಸುವ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಅಂತಿಮ ಗಡುವು ನೀಡಿದ್ದು, ಅದರ ಒಳಗಾಗಿ ಎಲ್ಲಾ ಕಟ್ಟಡ, ಸ್ಥಳೀಯ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದ ಆದೇಶದ ಒಳಗಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ಇಲ್ಲವಾದರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದಲೇ ಕನ್ನಡೇತರ ನಾಮಫಲಕ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಕಸಾಪ ಪದಾಧಿಕಾರಿಗಳಾದ ಬಿ.ಆರ್.ಬೊಮ್ಮೇಗೌಡ, ಹೆತ್ತೂರು ನಾಗರಾಜ್,ಶಂಕರ್ ಚಂದ್ರಶೇಖರ್, ಮಮತೇಶ್ ಮೊದಲಾದವರಿದ್ದರು.