ಮಳಖೇಡ: ಕನ್ನಡ ನಾಡು ಮತ್ತು ನುಡಿಗೆ ವಚನ ಸಾಹಿತ್ಯದ ಮೂಲಕ ಶರಣರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ಮುರಾರ್ಜಿ ವಸತಿ ಶಾಲೆಯಲ್ಲಿ ಬಸವೇಶ್ವರ ಸೇವಾ ಬಳಗದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ನುಡಿಗೆ ಶರಣರ ಕೊಡುಗೆ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವಚನ ಸಾಹಿತ್ಯ ಅಧ್ಯಯನ ಮಾಡುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಳಬೇಕು. ಅಂದಾಗಲೇ ಉಜ್ವಲ ಭವಿಷ್ಯ ನಿರ್ಮಾಣವಾಗಲು ಸಾಧ್ಯ. ಕನ್ನಡದ ಮೊಟ್ಟ ಮೊದಲ ಕೃತಿ ಕವಿರಾಜಮಾರ್ಗ ನೀಡಿದ ಪುಣ್ಯ ನೆಲ ಮಳಖೇಡ. ಇಂತಹ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಮಂಜಸವಾಗಿದೆ ಎಂದರು.
ಸಾಹಿತಿ ಮುಡಬಿ ಗುಂಡೇರಾವ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚನ್ನಯ್ಯ ಪುರಾಣಿಕ, ವಸತಿ ಶಾಲೆ ಪ್ರಾಚಾರ್ಯ ಮಲ್ಲಪ್ಪ ಗದ್ಯಾಳ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಸಿದ್ದಲಿಂಗಯ್ಯ ಕೋಡಗಿಮಠ, ಭೀಮರಾವ, ರಾಜೇಶ ಧನ್ನೆ, ಉಮೇಶ ಇತರರಿದ್ದರು. ಎಚ್.ಬಿ.ಪಾಟೀಲ್ ಸ್ವಾಗತಿಸಿ, ನಿರೂಪಣೆ ಮಾಡಿದರು. ರೇವಣಸಿದ್ದಪ್ಪ ಪಾಟೀಲ್ ವಂದಿಸಿದರು.