ಚಿತ್ರದುರ್ಗ: ಕನ್ನಡ ನಾಡು-ನುಡಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಂಪಿ ಕನ್ನಡ ವಿವಿ ರಾಜ್ಯದ ನಾನಾ ಕಡೆಗಳಲ್ಲಿ ಇರುವಂಥ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆ ನೀಡುತ್ತಿದೆ ಎಂದು ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶ್ರೀ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಹಾಗೂ ಶ್ರೀ ಮುರುಗಿ ಶಾಂತವೀರ ಸ್ವಾಮೀಜಿ ಅವರ ಕೃತಿಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಂಶೋಧನಾ ಕ್ಷೇತ್ರದ ವಿಸ್ತರಣೆಗೆ ರಾಜ್ಯದ ಹಲವು ಕೇಂದ್ರಗಳಿಗೆ ವಿವಿ ಮಾನ್ಯತೆ ನೀಡುತ್ತಿದೆ. ಇಲ್ಲಿ ಹೆಚ್ಚಿನ ಸಂಶೋಧನೆಗಳಾಗಬೇಕು. ಮುರುಗಿ ಶಾಂತವೀರ ಶ್ರೀಗಳು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎಂದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ, ಶ್ರೀ ಮುರುಘ ರಾಜೇಂದ್ರ ವಿವಿ ಕುಲಾಧಿಪತಿ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಗೌರವ ಸಂಪಾದಕತ್ವ, ಡಾ.ಬಿ. ರಾಜಶೇಖರಪ್ಪ ಅವರ ಪ್ರಧಾನ ಸಂಪಾದಕತ್ವ ಹಾಗೂ ಪ್ರಕಾಶ್‌ಗಿರಿ ಮಲ್ಲಣ್ಣನವರ ಸಂಪಾದಕತ್ವದಲ್ಲಿ ಹೊರಬಂದಿರುವ ‘ಸತ್ಯ ಶುದ್ಧಕಾಯಕ’ ವಿಶೇಷ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು.
ಹಂಪಿ ಕನ್ನಡ ವಿವಿ ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ್ ಯತಗಲ್ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಜನ ಸಮುದಾಯ, ಬುಡಕಟ್ಟು ಸಂಸ್ಕೃತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳಾಗುತ್ತಿವೆ. ನಾಡಿನ 24 ಕಡೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ಹೆಗ್ಗುಂದ ಶ್ರೀ ವನಕಲ್ಲು ಮಲ್ಲೇಶ್ವರ ಸಂಸ್ಥಾನಮಠದ ಡಾ. ಬಸವ ರಮಾನಂದ ಸ್ವಾಮೀಜಿ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಇತಿಹಾಸ ತಜ್ಞ ಡಾ. ಲಕ್ಷ್ಮಣ್ ತೆಲಗಾವಿ, ಹಸ್ತಪ್ರತಿ ತಜ್ಞ ಡಾ.ಬಿ. ನಂಜುಂಡಸ್ವಾಮಿ, ವಿಶ್ರಾಂತ ಕುಲಪತಿ ಡಾ.ಎ. ಮುರಿಗೆಪ್ಪ ಇದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ನವೀನ್ ಮಸ್ಕಲ್ ಸ್ವಾಗತಿಸಿ, ಡಾ. ಮಹಾಂತೇಶ್ ನಿರೂಪಿಸಿದರು.
ವಿಚಾರ ಸಂಕಿರಣ: ಮುರುಗಿ ಶಾಂತವೀರ ಸ್ವಾಮೀಜಿ ಗದ್ದುಗೆ ಸುತ್ತುತ್ತಿದ್ದ ನಮಗೆ ಅವರ ಸುತ್ತ ಇಷ್ಟೊಂದು ಸಾಹಿತ್ಯದ ಹರಿವಿದೆ ಎಂಬುದು ಅಚ್ಚರಿ ವಿಷಯ ಎಂದು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಹೇಳಿದರು.
ಶ್ರೀಗಳ ಕೃತಿಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇವತ್ತಿನ ತಲೆಮಾರು ಅಧ್ಯಯನ, ವಿದ್ವತ್ತಿನಿಂದ ತುಂಬಾ ದೂರವಿದೆ. ಹಸ್ತ ಪ್ರತಿ ಸಂಶೋಧಕ ಶಿವಣ್ಣ ಅವರು ಶ್ರೀಗಳ ಕೃತಿಗಳ ಕುರಿತು ಸಂಶೋಧನೆ, ಸಂಪಾದನೆ ಕೈಗೊಂಡಿದ್ದರಿಂದಾಗಿ ಶ್ರೀ ಮಠದ ಮೂಲ ಕರ್ತೃ ಬಗ್ಗೆ ಪೂರ್ಣ ಮಾಹಿತಿ ದೊರೆಯುವಂತಾಗಿದೆ ಎಂದರು.
ಹಸ್ತಪ್ರತಿ ತಜ್ಞರಾದ ಡಾ.ಎಫ್.ಟಿ. ಹಳ್ಳಿಕೇರಿ, ಡಾ. ವೀರೇಶ್ ಬಡಿಗೇರ, ವಿದ್ವಾಂಸ ಡಾ.ಸಿ.ಕೆ. ಜಗದೀಶ್, ಸಂಶೋಧಕಿ ಡಾ.ಪಿ. ಯಶೋದಾ ರಾಜಶೇಖರಪ್ಪ ಅವರು ವಿಷಯ ಮಂಡಿಸಿದರು.
ಡಾ. ಬಸವಕುಮಾರ ಸ್ವಾಮೀಜಿ, ಡಾ.ಲಕ್ಷ್ಮಣ್ ತೆಲಗಾವಿ, ಡಾ.ಬಿ.ರಾಜಶೇಖರಪ್ಪ, ಡಾ.ಬಿ. ನಂಜುಂಡಸ್ವಾಮಿ, ಹರಗುರು ಚರಮೂರ್ತಿಗಳು ಇದ್ದರು.
ನಾಳೆ ಶಿವಶರಣರ ವೇಷಭೂಷಣ ಸ್ಪರ್ಧೆ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಸೆ.28ರಂದು ಬೆಳಗ್ಗೆ 9ಕ್ಕೆ 12ನೇ ಶತಮಾನದ ಶಿವಶರಣರ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ವಯಸ್ಕರು ಭಾಗವಹಿಸಲು ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.