ಜಿಲ್ಲೆ

ಕನ್ನಡ ಡಿಂಡಿಮದ ಮಾರ್ದನಿ, ಉಸ್ತುವಾರಿ ಸಚಿವರಿಂದ ಗೌರವರಕ್ಷೆ, ಹಾರಾಡಿದ ಕನ್ನಡಬಾವುಟ

ದೇವನಹಳ್ಳಿ/ಬೆಂ.ಗ್ರಾಮಾಂತರ: ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಮುಗಿಲುಮುಟ್ಟಿತ್ತು, ಎಲ್ಲೆಲ್ಲೂ ಕನ್ನಡ ಡಿಂಡಿಮ ಮಾದರ್ನಿಸಿತು. ವಾರದಿಂದ ತಾಲೀಮು ನಡೆಸಿದ್ದ ಜಿಲ್ಲಾಡಳಿತ ಅಚ್ಚುಕಟ್ಟು ಕಾರ್ಯಕ್ರಮದ ಮೂಲಕ ಗಮನ ಸೆಳೆಯಿತು.

ನಿಗದಿತ ಅವಧಿಗೆ ಧ್ವಜಾರೋಹಣದ ಮೂಲಕ ರಾಜ್ಯೋತ್ಸವ ಸಂಭ್ರಮದಲ್ಲಿ ಗಣ್ಯರು ಭಾಗಿಯಾದರು. ಆರಕ್ಷಕರ ಶಿಸ್ತುಬದ್ಧ ಪರೇಡ್, ಉಸ್ತುವಾರಿ ಸಚಿವರಿಂದ ಗೌರವ ರಕ್ಷೆ ಸ್ವೀಕಾರ, ಗಣ್ಯರ ಭಾಷಣ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಗೌರವ ಸಮರ್ಪಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸರ್ಕಾರದ ಯೋಜನೆಯಡಿ ಲಾನುಭವಿಗಳಿಗೆ ವಿವಿಧ ಪರಿಕರ ವಿತರಣೆ, ಅಗಲಿದ ನಟ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಮತ್ತಿತರ ವಿಶೇಷತೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಸಾಕ್ಷಿಯಾಯಿತು.

ಜಿಲ್ಲಾ ಪ್ರಗತಿಗೆ ಸಿಗಲಿದೆ ವೇಗ: ಕರೊನಾ ಕಾರಣದಿಂದ ಇಷ್ಟು ದಿನ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅಡೆತಡೆಯಾಗಿತ್ತು. ಪ್ರಸ್ತುತ ಸೋಂಕು ತಹಬಂದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆಯಲಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಪಿಎಂ ಕೇರ್ ಅನುದಾನಡಿ ಪ್ರತಿ ತಾಲೂಕಿನಲಿ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ ಹಾಗೂ ಕೋವಿಡ್‌ಮಹಾ ಮಾರಿ ವಿರುದ್ಧ ಹೋರಾಡಲು ಸರ್ಕಾರ ಲಸಿಕಾ ಅಭಿಯಾ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಿದೆ ಎಂದು ತಿಳಿಸಿದರು.

ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ, ಇಲ್ಲಿನ ಇತಿಹಾಸ ಪರಪಂಪರೆಗೆ ವಿಶ್ವಮಾನ್ಯತೆ ಇದೆ. ಇಂಥ ಕನ್ನಡ ನಾಡಿನಲ್ಲಿ ಉಸಿರಾಡುತ್ತಿರುವ ನಾವೆಲ್ಲರೂ ಪುಣ್ಯವಂತರು ಎಂದು ಅತಿಶಯೋಕ್ತಿಯಾಗಲಾರದು ಎಂದರು.

ದೂಷಿಸುವ ಬದಲು ಕನ್ನಡ ಬೆಳೆಸೋಣ: ಅನ್ಯ ಭಾಷಿಗರನ್ನು ದೂಷಿಸುವ ಬದಲು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಮುಂದಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಮೊದಲು ಜನಪ್ರತಿನಿಧಿಗಳಿಗೆ ಭಾಷೆಯ ಮೇಲೆ ಅಭಿಮಾನ ಮೂಡಬೇಕು. ಸದನದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾತನಾಡುವಂತಾಗಬೇಕು ಎಂದರು.

ದೇವನಹಳ್ಳಿಯನ್ನು ಜಿಲ್ಲಾಡಳಿತ ಕೇಂದ್ರವೆಂದು ಘೋಷಣೆ ಮಾಡುವಂತೆ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತಿದ್ದೇನೆ. ಇದನ್ನು ಸಚಿವರು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಉಸ್ತುವಾರಿ ಸಚಿವರಿಂದ ಗೌರ ರಕ್ಷೆ: ಪೊಲೀಸ್ ಇಲಾಖೆಯ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಪರೇಡ್ ವೀಕ್ಷಿಸಿ, ವಿವಿಧ ತುಕಡಿಗಳಿಂದ ಗೌರವರಕ್ಷೆ ಸ್ವೀಕರಿಸಿದರು. ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿ ಬಣ್ಣಬಣ್ಣದ ಬಲೂನ್ ಹಾರಿಬಿಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 17 ಹೋಬಳಿಗಳ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಸಾಮರ್ಥ್ಯ ಹೆಚ್ಚಿಸಲು ಅಳವಡಿಸಲಾದ ಸ್ಮಾರ್ಟ್ ಪ್ಯಾನಲ್ ಟಿ.ವಿ ಬೋಧನಾ ವಿಡಿಯೋ ಸಂವಾದದ ತರಗತಿಗೆ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿದರು.

ವಿವಿಧ ಕಾರ್ಯಕ್ರಮಗಳು: ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ಗಮನ ಸೆಳೆಯಿತು. ಇದೇ ವೇಳೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ, ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಲಾಯಿತು. ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕುರಿತು ಜನ ಜಾಗೃತಿ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.

ಆಕರ್ಷಕ ಪಥಸಂಚಲನ: ಡಿಎಸ್‌ಪಿ ಜಯರಾಂ ಮಾರ್ಗದರ್ಶನದಲ್ಲಿ ಪರೇಡ್ ಕಮಾಂಡರ್ ಮರಳುಸಿದ್ದಪ್ಪ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಡಿಆರ್‌ತಂಡ, ಮಹಿಳಾ ಪೋಲಿಸ್ ತಂಡ, ನಾಲ್ಕೂ ತಾಲೂಕುಗಳ ಉಪವಿಭಾಗದ ತಂಡ ಮತ್ತು ಗ್ರಾಮಾಂತರ ಅರಣ್ಯ ಇಲಾಖೆ ತಂಡಗಳು ಪೊಲೀಸ್ ಬ್ಯಾಂಡ್‌ನೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದವು.

ಪವರ್‌ಸ್ಟಾರ್‌ಗೆ ಶ್ರದ್ಧಾಂಜಲಿ: ಹೃದಯಾಘಾತದಿಂದ ಮೃತರಾದ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ 2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪವರ್‌ಸ್ಟಾರ್ ಸರಳತೆ, ಕನ್ನಡತನದ ಬಗ್ಗೆ ಗಣ್ಯರು ಗುಣಗಾನ ಮಾಡಿದರು.

ಪ್ರಶಸ್ತಿ ಪುರಸ್ಕಾರ: ರಸ್ತೆ ಸುರಕ್ಷತೆ ಅರಿವು ಮೂಡಿಸುತ್ತಿರುವ ದೊಡ್ಡಬಳ್ಳಾಪುರದ ಸಾಮಾಜಿಕ ಕಾರ್ಯಕರ್ತಎಂ.ಎಸ್.ಮಂಜುನಾಥ್, ಶಿಕ್ಷಣ ಕ್ಷೇತ್ರದ ಸಾಧನೆಗೆ ಬಿ.ಎನ್.ಸ್ವಾಮಿ, ದೇವನಹಳ್ಳಿ ತಾಲೂಕಿನ ಇತಿಹಾಸ ಸಂಶೋಧಕ ಸಾಹಿತಿ ಬಿಟ್ಟಸಂದ್ರ ಗುರುಸಿದ್ದಯ್ಯ, ಶಿಲ್ಪಕಲೆ ಸಂಸ್ಕೃತಿ ರಕ್ಷಣೆಗಾಗಿ ದೇವನಹಳ್ಳಿಯ ಶಿಲ್ಪಿ ಎಚ್. ಮಧುಸೂದನ, ರಂಗಭೂಮಿ ಕಲಾಸೇವೆಗಾಗಿ ಹೊಸಕೋಟೆಯ ಎಂ. ರಾಮಚಂದ್ರಪ್ಪ, ಕೃಷಿ ಕ್ಷೇತ್ರದ ಸಂಶೋಧನೆಗಾಗಿ ನೆಲಮಂಗಲದ ಡಾ. ಸಿ.ನಾಗರಾಜ್, ಮಹಿಳೆಯರಿಗಾಗಿ ಸ್ವಾವಲಂಬನೆ ಜೀವನೋಪಯ ನೆರವಿನ ಸೇವೆಗಾಗಿ ನೆಲಮಂಗಲದ ಎಚ್.ಎಸ್.ರೇವತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ದೇವನಹಳ್ಳಿಯ ಇಡಗುಂಜಿ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ ಆಕರ್ಷಣೀಯವಾಗಿತ್ತು.