ಮೈಸೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥಯಾತ್ರೆ’ಗೆ ನಗರದಲ್ಲಿ ಸೋಮವಾರ ಸ್ವಾಗತ ಕೋರಲಾಯಿತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಮುಂಭಾಗ ಜಿಲ್ಲಾಡಳಿತದ ವತಿಯಿಂದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಳ್ಳಲಾಯಿತು.
ಮಂಡ್ಯದಲ್ಲಿ ಡಿ.20, 21, 22ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುವ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.