ಸುಂಟಿಕೊಪ್ಪ: ಕನ್ನಡದೊಂದಿಗೆ ಕೊಡವ ಭಾಷೆಗೆ ಅವಿನಾಭಾವ ಸಂಬಂಧವಿದೆ. ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮುನೀರ್ ಆಹ್ಮದ್ ಹೇಳಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಂಟಿಕೊಪ್ಪ ಪ್ರೌಢಶಾಲೆಯ ಕನ್ನಡ ಸಾಹಿತ್ಯ ಸಂಘದೊಂದಿಗೆ ಮೊಣ್ಣಂಡ ಜೆ.ಚಂಗಪ್ಪ ಸ್ಮಾರಕ ದತ್ತಿ ನಿಧಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಬೆಳವಣಿಗೆ ಕುರಿತು ಮಾತನಾಡಿದರು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ. ಪಠ್ಯ ಪುಸ್ತಕದ ಜತೆಗೆ ಕಥೆ, ಕಾದಂಬರಿಯನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನಾಭಿವೃದ್ಧಿಯಾಗಲಿದೆ ಎಂದರು.
ಕೊಡವ ಭಾಷೆಗೆ ಲಿಪಿ ಇಲ್ಲದಿದ್ದರೂ ವಿಶಿಷ್ಟತೆ ಹೊಂದಿದೆ. ಹರದಾಸ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಪಂಜೆ ಮಂಗೇಶರಾಯರ ಹುತ್ತರಿ ಹಾಡು ಕೊಡವ ಭಾಷಾ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. 1.5 ಲಕ್ಷ ಜನರು ಕೊಡವ ಭಾಷೆ ಮಾತನಾಡುತ್ತಿದ್ದು, ಹೊರ ರಾಜ್ಯ, ದೇಶಗಳಿಗೆ ತೆರಳಿದ ಕೊಡವರು ಕೊಡವ ಭಾಷೆ ಮರೆತಿರುವುದು ವಿಷಾದನೀಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಭಾಷಾ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.
ಕೊಡಗು ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಉಪ ಪ್ರಾಂಶುಪಾಲ ಬಾಲಕೃಷ್ಣ, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್, ತಾಲೂಕು ನಿಕಟಪೂರ್ವ ಅಧ್ಯಕ್ಷ ಟಿ.ಜಿ.ಪ್ರೇಮ್‌ಕುಮಾರ್, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ವಹೀದ್ ಜಾನ್, ಸುಂಟಿಕೊಪ್ಪ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷೆ ಲೀಲಾವತಿ, ಶೈಲಾಜಾ ಪ್ರೇಮ್‌ಕುಮಾರ್ ಮತ್ತಿತರರು ಇದ್ದರು.