ಚಿತ್ರದುರ್ಗ: ಕನ್ನಡ ಕಲಿಕೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾ ರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿ ದೇಶದ ಸಮಗ್ರತೆ ಆಶಯವನ್ನು ಕಾಣಬಹುದು. ಜೈನ, ಲಿಂಗಾಯತ ಧರ್ಮಗಳಿಂದಾಗಿ ಕನ್ನಡ ಶ್ರೀಮಂತವಾಗಿದೆ. ಆದಿಕವಿ ಪಂಪ, ರನ್ನ, ನಾಗಚಂದ್ರ ಮೊದಲಾದವರ ಸಾಹಿತ್ಯ ಹಾಗೂ ಬಸವಾದಿ ಶರಣರ ವಚನ ಸಾಹಿತ್ಯ ಕನ್ನಡ ಭಾಷೆಗೆ ಘನತೆ ತಂದು ಕೊಟ್ಟಿವೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ರಾಜ್ಯೋತ್ಸವದ ಆಶಯ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ನಿತ್ಯೋತ್ಸವ ಆಗಬೇಕು. ಕನ್ನಡ ನಮ್ಮ ಜೀವನದ ವಿಧಾನವಾಗಬೇಕು. ನಮ್ಮ ಉಸಿರಾಗಬೇಕು ಎಂದು ತಿಳಿಸಿದರು.
ಈ ನಾಡಿನಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಇಡೀ ಜಗತ್ತಿಗೆ ಒಳಿತಾಗಲಿ ಎಂಬ ಸಂದೇಶ ನೀಡಿದ್ದು ಬಸವ ಕಲ್ಯಾಣದಿಂದ. ಸಮ ಸಮಾಜ, ಸರ್ವರಿಗೂ ಸಮಪಾಲು ಸಮಬಾಳು, ಪ್ರಜಾಪ್ರಭುತ್ವದ ಆಲೋಚನೆ ಮತ್ತು ಪರಿಕಲ್ಪನೆ ಹುಟ್ಟಿದ್ದು ಕನ್ನಡ ನೆಲದಲ್ಲಿ ಎಂದರು.
ಪ್ರಾಚಾರ‌್ಯ ಡಾ.ಪಿ.ಬಿ. ಭರತ್, ನಟ ಪೃಥ್ವಿ ಶಾಮನೂರು ಮಾತನಾಡಿದರು. ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಕೆ.ಆರ್. ಕೃಷ್ಣಾರೆಡ್ಡಿ, ಡಾ.ಕೆ.ಬಿ. ಸಿದ್ದೇಶ್, ಡಾ.ಜೆ.ಎಂ. ಶ್ರೀಶೈಲ, ಡಾ.ಎಸ್.ಪಿ. ಶಿವಕುಮಾರ್, ಡಾ.ಎಚ್.ಜೆ. ಲೋಕೇಶ್, ಪ್ರೊ.ಎ.ಪಿ. ಶಶಿಧರ್, ಡಾ.ಇ. ನಿರಂಜನ್, ಡಾ.ಕೆ. ಕುಮಾರಸ್ವಾಮಿ ಇದ್ದರು. ಆಕಾಂಕ್ಷಾ ಪ್ರಾರ್ಥಿಸಿದರು. ನಾಗಸಾರಿಕ ಸ್ವಾಗತಿಸಿ, ಚಂದನಾ ವಂದಿಸಿದರು. ರುಚಿತಾ, ರಚನಾ ನಿರೂಪಿಸಿದರು. ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.
...