ಜಿಲ್ಲೆ

ಕನ್ನಡ ಎಂದರೆ ಕೇವಲ ಒಂದು ಭಾಷೆಯಲ್ಲ ಅದೊಂದು ಭಾವ-ಬಂಧ: ಕೆ. ಗೋಪಾಲಯ್ಯ


ಹಾಸನ:
ನಗರದ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ನಡೆದ ವರ್ಣರಂಜಿತ 67ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ನಾಡು-ನುಡಿಯ ಶ್ರೇಷ್ಟತೆಯನ್ನು ಸ್ಮರಿಸುವುದರ ಜೊತೆಗೆ ಹಾಸನ ಜಿಲ್ಲೆಯ ಮಹತ್ವದ ಅಂಶಗಳನ್ನೂ ನೆನಪಿಸಿದರು.

ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳ್ಳಲು ಶಿಫಾರಸುಗೊಂಡಿದ್ದು, ಶೀಘ್ರವೇ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಕನ್ನಡದ ಪ್ರಥಮ ಶಿಲಾ ಶಾಸನ ಬೇಲೂರು ತಾಲೂಕು ಹಲ್ಮಿಡಿಯಲ್ಲಿ ದೊರೆತಿರುವುದು ಜಿಲ್ಲೆಯ ಹಮ್ಮೆ. ಅದೇ ರೀತಿ ದೇಶದ ಪ್ರಧಾನಿ ಆಗಿದ್ದ ಎಚ್.ಡಿ. ದೇವೇಗೌಡ, ಸಾಹಿತಿಗಳಾದ ಅ.ನ. ಕೃಷ್ಣರಾಯ, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ಕೆ. ಕರೀಂಖಾನ್, ರಾಜಾರಾಯ, ಪ್ರೊ.ಎಸ್.ಎಲ್. ಭೈರಪ್ಪ, ಕೀ.ರಂ. ನಾಗರಾಜ್, ಪತ್ರಕರ್ತರಾದ ಶಾರದಾ ಪ್ರಸಾದ್, ಗರುಡನಗಿರಿ ನಾಗರಾಜ್, ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಪ್ಯಾರಾ ಒಲಿಂಪಿಕ್ ಚಾಂಪಿಯನ್ ಗಿರೀಶ್ ಮತ್ತಿತರರು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ ಎಂದು ಕೊಂಡಾಡಿದರು.

ಕನ್ನಡ ಎಂದರೆ ಕೇವಲ ಒಂದು ಭಾಷೆಯಲ್ಲ ಅದೊಂದು ಭಾವ-ಬಂಧ. ನಾವೆಲ್ಲಾ ಕನ್ನಡಿಗರು ಒಂದಾಗಿ ವಿಶ್ವವೇ ಮೆಚ್ಚುವಂತೆ ನಮ್ಮ ನಾಡನ್ನು ಬಹುಮುಖವಾಗಿ, ಸುಸಂಸ್ಕೃತವಾಗಿ ಕಟ್ಟಿ ಬೆಳೆಸೋಣ, ಆ ಮೂಲಕ ಭಾರತಾಂಬೆಯ ಹೆಮ್ಮೆಯ ತನುಜಾತೆಯ ಮಕ್ಕಳಾಗೋಣ ಎಂದು ಕರೆ ನೀಡಿದರು.

ಮಳೆ ಹಾನಿ:
ಈ ವರ್ಷ ಮಳೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಜೀವ ಹಾನಿ, ಬೆಳೆ ಹಾನಿ, ಮನೆ ಹಾನಿ, ರಸ್ತೆ, ಸಾರ್ವಜನಿಕ ಕಟ್ಟಡಗಳು ಹಾಗೂ ಕೆರೆ ಕಟ್ಟೆಗಳಿಗೆ ಹಾನಿ ಉಂಟು ಮಾಡಿದೆ. ಜೂನ್‌ನಿಂದ ಅಕ್ಟೋಬರ್ ಮೂರನೇ ವಾರದವರೆಗೂ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 11 ಮಾನವ ಜೀವ ಹಾನಿಯಾಗಿದೆ. 3262 ಮನೆಗಳು ವಿವಿಧ ಸ್ವರೂಪದಲ್ಲಿ ಹಾನಿಗೀಡಾಗಿದ್ದು ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಕಾಫಿ ಬೆಳೆ ಸೇರಿ ಒಟ್ಟು 12,004.51 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 66,941 ಫಲಾನುಭವಿಗಳಿಗೆ 102.94 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ. ಮನೆ ಹಾನಿ ನಿರ್ವಹಣೆ ಮೂಲಭೂತ ಸೌಕರ್ಯಗಳ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಒಟ್ಟು 27.93 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು:
ಬಹುಗ್ರಾಮ ಕುಡಿಯವ ನೀರು ಸರಬರಾಜು ಯೋಜನೆಯಡಿ ಹಾಸನ ಜಿಲ್ಲೆಗೆ ಒಟ್ಟು 1166.92 ಕೋಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2022-23 ನೇ ಸಾಲಿನಲ್ಲಿ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 75 ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಒಟ್ಟು 33 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 396 ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದುವರೆಗೆ 218 ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇಕಡ 55 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಯೋಜನೆ:
ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಯೋಜನೆ ಅಡಿ 2022-23 ನೇ ಸಾಲಿಗೆ ಜಿಲ್ಲೆಗೆ ಒಟ್ಟು 87.25 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, 1107 ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ 170 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸಲು 119 ಮಹಿಳೆಯರಿಗೆ ಆಟೋ ಟಿಪ್ಪರ್ ತರಬೇತಿ ಮತ್ತು 315 ಮಹಿಳೆಯರಿಗೆ ನರ್ಸರಿ ತರಬೇತಿ ನೀಡಲಾಗಿದೆ ಎಂದರು.

ಸ್ತ್ರೀ ಸಾಮರ್ಥ್ಯ ಯೋಜನೆ:
ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ತಾಲ್ಲೂಕಿನಲ್ಲಿ 150 ಸ್ವ-ಸಹಾಯ ಗುಂಪುಗಳ ಮಹಿಳಾ ಉದ್ಯಮಿಗಳನ್ನು ಗುರುತಿಸಿ, ಈ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದ್ದು ಸ್ಯಾನಿಟರಿ ಪ್ಯಾಡ್, ಚಿಕ್ಕಿ, ಕ್ಯಾಂಟೀನ್, ಆಹಾರ ಪದಾರ್ಥಗಳು ಇತ್ಯಾದಿ 15 ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ 3 ಗೋಶಾಲೆ ಪ್ರಾರಂಭ:
2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಗೋ ಸಂಪತ್ತಿನ ಸಂರಕ್ಷಣೆಗೆ ಪ್ರಸ್ತುತ ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100 ಕ್ಕೆ ಹೆಚ್ಚಿಸಲಾಗಿರುತ್ತದೆ. ಈ ಪೈಕಿ ಹಾಸನ ಜಿಲ್ಲೆಗೆ ಹೆಚ್ಚುವರಿಯಾಗಿ ಮೂರು ಗೋಶಾಲೆಗಳನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ತಾಲ್ಲೂಕಿನ ಅಮೃತ್ ಮಹಲ್ ತಳಿ ಸಂವರ್ಧನ ಉಪಕೇಂದ್ರ, ರಾಯಸಮುದ್ರ ಕಾವಲಿನ 25 ಎಕರೆ ಜಮೀನಿನಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಹಾಗೂ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿ ಸಿದ್ದಾಪುರ ಗ್ರಾಮದ 9.38 ಎಕರೆ ಜಮೀನಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಮತ್ತೊಂದು ಗೋಶಾಲೆಯನ್ನು ಅರಕಲಗೂಡು ತಾಲ್ಲೂಕಿನಲ್ಲಿ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅ.15 ರಂದು ಬಾಣಾವರ ಸಮೀಪ ನಡೆದ ಭೀಕರ ಅಪಘಾತದಲ್ಲಿ ಅರಸೀಕೆರೆ ತಾಲೂಕಿನ ಒಂದೇ ಕುಟುಂಬದ 9 ಸದಸ್ಯರು ಮೃತ ಪಟ್ಟಿದ್ದರಿಂದ ಸದರಿ ಕುಟುಂಬದ ವಾರಸುದಾರರಿಗೆ ತಲಾ 5 ಲಕ್ಷದಂತೆ ಒಟ್ಟು 45 ಲಕ್ಷ ರೂ. ಪರಿಹಾರವನ್ನು ಸರ್ಕಾರದಿಂದ ಪಾವತಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳಿಂದ ವರ್ಣರಂಜಿತ ಕಾರ್ಯಕ್ರಮ:
ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಕನ್ನಡ ಸಂಸ್ಕೃತಿ ಬಿಂಬಿಸುವ ವರ್ಣರಂಜಿತ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ನಡೆದವು. ಹುಲಿವೇಷದ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು. ಅಲ್ಲದೆ, ಪೊಲೀಸ್, ಎನ್‌ಸಿಸಿ, ಗೃಹ ರಕ್ಷಕದ ದಳ ಮತ್ತು ವಿವಿಧ ಶಾಲಾ ಕಾಲೇಜುಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.
ವಿವಿಧ ಕ್ಷೇತ್ರಗಳ 22 ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಹರಿರಾಮ್ ಶಂಕರ್, ನಗರಸಭೆ ಅಧ್ಯಕ್ಷ ಆರ್. ಮೋಹನ್, ಜಿಪಂ ಸಿಇಒ ಕಾಂತರಾಜ್, ಎಎಸ್ಪಿ ತಮ್ಮಯ್ಯ, ಎಸಿ ಜಗದೀಶ್, ಹಿರಿಯ ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.