ಜಿಲ್ಲೆ

ಕನ್ನಡ ಅಪೂರ್ವವಾದ ಶ್ರೀಮಂತ ಭಾಷೆ: ಸುತ್ತೂರುಶ್ರೀ

ಮೈಸೂರು: ಕನ್ನಡ ಸರಳ ಮತ್ತು ಸುಂದರವಾದ ಭಾಷೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾವೇರಿ ಕನ್ನಡ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ. ಅದು ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕವಾಗಿಯೂ ಅಪೂರ್ವ ಶ್ರೀಮಂತಿಕೆ ಹೊಂದಿದೆ. ಕಾವೇರಿ ನದಿ ತಲಕಾವೇರಿಯಲ್ಲಿ ಸಣ್ಣ ತೊರೆಯಾಗಿ ಉಗಮಿಸಿ ನಂತರ ದೊಡ್ಡದಾಗಿ ಹರಿದಂತೆ, ಅಮೆರಿಕದಲ್ಲಿ ಚಿಕ್ಕದಾಗಿ ಆರಂಭವಾದ ಈ ಸಂಘ ಇಂದು ಬೃಹತ್ತಾಗಿ ಬೆಳೆಯುವಲ್ಲಿ ಅನೇಕ ಮಹನೀಯರ ಕೊಡುಗೆಯಿದೆ ಎಂದರು.

ಅಮೆರಿಕದ ಮಾಂಟೊಗೊಮರಿಯ ಕೌಂಟಿಯ ಕಾರ್ಯನಿರ್ವಾಹಕ ಮಾರ್ಕ್ ಎನ್‌ರಿಚ್ ಮಾತನಾಡಿ, ಅಮೆರಿಕದಲ್ಲಿ ಎಲ್ಲ ಕಾರ್ಯಗಳಲ್ಲೂ ಭಾರತೀಯ ಸಮುದಾಯದವರು ಬಹಳ ಪ್ರಮುಖವಾದ ಪಾತ್ರ ವಹಿಸುತ್ತಾರೆ ಎಂದರು.

ಭಾರತದ ರಾಯಭಾರ ಕಚೇರಿಯ ಶೈಕ್ಷಣಿಕ ಮತ್ತು ಸಮುದಾಯ ವಿಭಾಗದ ಕೌನ್ಸಿಲರ್ ಅನ್ಸುಲ್ ಶರ್ಮಾ ಮಾತನಾಡಿ, ಈ ಸಂಘ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಭಾರತ ಮತ್ತು ಅಮೆರಿಕದ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ರಾಬರ್ಟ್ ಎಚ್ ಬ್ಯುಸಿನೆಸ್ ಸ್ಕೂಲ್‌ನ ಡೀನ್ ಪ್ರಭುದೇವ ಕೊನಾನ ಮಾತನಾಡಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿ ಅಮೆರಿಕದಲ್ಲಿ ಒಂದು ಘನತೆಯನ್ನು ಹೊಂದಿದೆ. ಇಲ್ಲಿನ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕನ್ನಡವನ್ನು ಬೋಧಿಸುವ ಕಾರ್ಯ ಆರಂಭವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಂಘದ ಸಂಸ್ಥಾಪಕ ಸದಸ್ಯ ಭಾರತಿ ಶೆಟ್ಟಿ, ರಾಜಶೇಖರ್ ದೊಡ್ಡಣ್ಣ, ಕಾವೇರಿ ಕೃಷ್ಣಮೂರ್ತಿ, ಸತೀಶ್ ಬೆಳಗುತ್ತಿ ಮತ್ತು ಸಂಘದ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಅಮೆರಿಕದ ಕನ್ನಡಿಗರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.