ನೆಲಮಂಗಲ: ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಪಂ ನೌಕರರಿಗೆ ಪರಿಹಾರ ಜತೆಗೆ ಕನಿಷ್ಠ ವೇತನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪಂಚಾಯಿತಿ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ನಗರದ ತಾಪಂ ಆವರಣದಲ್ಲಿ ಶುಕ್ರವಾರ ತಾಪಂ ಇಒ ಲಕ್ಷ್ಮೀನಾರಾಯಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗ್ರಾಪಂ ನೌಕರರಿಗೆ ಸರ್ಕಾರ 2003ರಲ್ಲಿ ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಿದೆ. ಆದರೆ ತಾಲೂಕಿನಲ್ಲಿ ನರಸೀಪುರ, ಸೋಲದೇವನಹಳ್ಳಿ ಸೇರಿ ಕೆಲ ಗ್ರಾಪಂಗಳಲ್ಲಿ ಇನ್ನು ಕೆಲ ನೌಕರರಿಗೆ ಕನಿಷ್ಠ ವೇತನ ನೀಡಿಲ್ಲ. ವೇತನಕ್ಕೆ ವೀಸಲಿಟ್ಟಿದ ಹಣ ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ತಿಂಗಳ ಪೂರ್ತಿ ದುಡಿಸಿಕೊಂಡು ವೇತನ ಕೇಳಿದರೆ ಕೆಲಸ ಬಿಟ್ಟುಹೋಗುವಂತೆ ಪಿಡಿಒಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್-19 ತುರ್ತು ಪರಿಹಾರಕ್ಕೆ ಗ್ರಾಪಂ ಕಾರ್ಯದರ್ಶಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ ಕರವಸೂಲಿಗಾರರು ಮತ್ತು ನೀರುಗಂಟಿ, ಎಲೆಕ್ಟ್ರಿಷಿಯನ್‌ಗಳಿಗೂ ಸಮಾನ ಪರಿಹಾರ ನೀಡಬೇಕು. ಜತೆಗೆ ವೇತನ ಹೆಚ್ಚಳ ಮಾಡಬೇಕು. ಸರ್ಕಾರ ಬಾಕಿ ಉಳಿಸಿಕೊಂಡಿರುವ 380 ಕೋಟಿ ರೂ. ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಪಂ ಸಹಾಯಕ ನಿರ್ದೇಶಕ ಪದ್ಮನಾಭ್, ಜಿಲ್ಲಾಧ್ಯಕ್ಷ ಟಿ.ಎಂ.ನಟರಾಜು, ತಾಲೂಕು ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಗಂಗಧಾರ್, ಕಾರ್ಯದರ್ಶಿ ಶ್ರೀನಿವಾಸ್‌ಆಚಾರ್, ಖಜಾಂಚಿ ಟಿ.ಶ್ರೀಧರ್, ಸದಸ್ಯ ಜಿ.ಮುನಿರಾಜು ಮತ್ತಿತರರಿದ್ದರು.
ಕರೊನಾದಿಂದಾಗಿ ಮೂರ‌್ನಾಲ್ಕು ತಿಂಗಳಿಂದ ಕೆಲ ಗ್ರಾಪಂನಲ್ಲಿ ವೇತನ ವಿಳಂಬವಾಗಿರಬಹುದು. ಕೂಡಲೇ ಆಯಾ ಗ್ರಾಪಂ ಪಿಡಿಒಗಳೊಂದಿಗೆ ಮಾತನಾಡಿ ಈ ಬಗ್ಗೆ ಗಮನ ಹರಿಸಲಾಗುವುದು, ಜತೆಗೆ ಮುಂದಿನ ದಿನಗಳಲ್ಲಿ ಪಿಡಿಒ ಸಭೆ ಆಯೋಜಿಸಿ ಅದರ ಬಗ್ಗೆ ಚರ್ಚಿಸಲಾಗುವುದು. ಲಕ್ಷ್ಮೀನಾರಾಯಣ್, ತಾಪಂ ಇಒ