ಬೆಳಗಾವಿ: ಕನಿಷ್ಠ ವೇತನ ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಎಐಟಿಸಿಯು ಸಂಘಟನೆಯ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶುಕ್ರವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಯೋಜನೆ ಐಸಿಡಿಎಸ್‌ಗೆ ಕೆಲಸಗಾರರನ್ನು ಖಾಯಂಗೊಳಿಸಿ, ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಕಾರ್ಮಿಕ ವಿರೋಧಿ ಸಂಹಿತೆ ಹಿಂಪಡೆಯಬೇಕು. ಯೋಜನೆಯಡಿ ಕೆಲಸಮಾಡುವ ಸಿಬ್ಬಂದಿಯನ್ನು ಕಾರ್ಮಿಕರೆಂದು ಪರಿಗಣಿಸಬೇಕು.
ಅವರಿಗೆ ಮಾಸಿಕ 21,000 ರೂ. ವೇತನ ನೀಡಬೇಕು. ಮಂಚೂಣಿಯಲ್ಲಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 50 ಲಕ್ಷ ರೂ. ಆರೋಗ್ಯ ವಿಮೆ ಮಾಡಿಸುವುದರ ಮೂಲಕ ಸೇವೆಯಲ್ಲಿದ್ದಾಗ ನಿಧನರಾದವರಿಗೆ ಸೌಲಭ್ಯ ಕಲ್ಪಿಸಬೇಕು. ಹೆಚ್ಚುವರಿಯಾಗಿ ಮಾಸಿಕ 10,000 ರೂ. ಕೋವಿಡ್-19 ಭತ್ಯೆ ನೀಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಎಐಟಿಸಿಯು ಜಿಲ್ಲಾಧ್ಯಕ್ಷ ಎನ್.ಎನ್.ಸಾತೇರಿ, ಉಪಾಧ್ಯಕ್ಷ ವೈ.ಬಿ.ಶೀಗಿಹಳ್ಳಿ, ಮೀನಾಕ್ಷಿ ಕೊಟಗಿ, ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.