ಜಿಲ್ಲೆ

ಕನಿಷ್ಠ ಮೂಲಸೌಕರ್ಯವೂ ಇಲ್ಲದ ಮಲ್ಲಾಪುರ, ಬಡಾವಣೆಗೆ ಬಾರದ ಶುದ್ಧ ನೀರು, ರಸ್ತೆ, ಚರಂಡಿ ಎಲ್ಲವೂ ಅವ್ಯವಸ್ಥೆ, ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ದುರ್ವಾಸನೆ

ಸುಗ್ಗರಾಜು ಜಿ.ಕೆ. ನೆಲಮಂಗಲ

ನಗರಸಭೆ ವ್ಯಾಪ್ತಿಯ ಮಲ್ಲಾಪುರ ಗ್ರಾಮಸ್ಥರು ಮೂಲಸೌಕರ್ಯಗಳಿಗಾಗಿ ಪರಿತಪಿಸುವಂತಾಗಿದೆ.

ಹಳೆಯ ಮಲ್ಲಾಪುರ ಗ್ರಾಮ ಒಳಗೊಂಡಂತೆ ಸುತ್ತಲೂ ವಸತಿ ಬಡಾವಣೆಗಳು ನಿರ್ಮಾಣವಾಗಿವೆ. ಆದರೆ ಇದುವರೆಗೂ ಶುದ್ಧ ನೀರು ಬಡಾವಣೆಗಳಿಗೆ ಹರಿದಿಲ್ಲ. ರಸ್ತೆ, ಚರಂಡಿಗಳೆಲ್ಲವೂ ಅವ್ಯವಸ್ಥಿತವಾಗಿವೆ. ಅಸಮರ್ಪಕ ನಿರ್ವಹಣೆಯಿಂದ ವಿದ್ಯುತ್ ದೀಪ ಬೆಳಗಿದ್ದನ್ನು ಕಂಡವರೇ ಇಲ್ಲ. ತ್ಯಾಜ್ಯ ವಿಲೇವಾರಿಯಲ್ಲಿಯೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ, ಎಲ್ಲ ಬಡಾವಣೆಗಳಲ್ಲೂ ದುರ್ವಾಸನೆ ಹಬ್ಬಿದೆ.

28ನೇ ವಾರ್ಡ್‌ನ ದುಸ್ಥಿತಿ: ವಾಜರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದ್ದ ಉತಾಸಿಪಾಳ್ಯ, ಮಲ್ಲಾಪುರ ಗ್ರಾಮ, ಅರಿಶಿಣಕುಂಟೆ ಗ್ರಾಪಂ ವ್ಯಾಪ್ತಿಯ ಹೊನ್ನಗಂಗಯ್ಯನ ಪಾಳ್ಯ, ಸುಬ್ರಮಣ್ಯ ನಗರ ಪ್ರದೇಶಗಳನ್ನು ವಿಲೀನಗೊಳಿಸಿ ನೆಲಮಂಗಲ ನಗರಸಭೆಯ 28ನೇ ವಾರ್ಡ್ ಆಗಿ ವಿಂಗಡಿಸಲಾಗಿದೆ. ಈ ಕಾರ್ಯ ಆಗಿ ಎರಡೂವರೆ ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೆ ನಗರಸಭೆ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ಸಮಸ್ಯೆ ಹೇಳಿಕೊಂಡರೂ ಪರಿಹರಿಸುವ ಗೋಜಿಗೆ ಹೋಗಿಲ್ಲ.

ಸಾಂಕ್ರಾಮಿಕ ರೋಗ ಭೀತಿ: ನಗರಸಭೆಯಲ್ಲಿ ವಿಲೀನಗೊಂಡ ನಂತರದಿಂದ ಇದೂವರೆಗೆ ಮಲ್ಲಾಪುರ, ಹೊನ್ನಗಂಗಯ್ಯನ ಪಾಳ್ಯ, ಸುಬ್ರಮಣ್ಯ ನಗರದ ಉತಾಸಿಪಾಳ್ಯ ಸೇರಿ ಸುತ್ತಮುತ್ತಲ ವಸತಿ ಬಡಾವಣೆಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ. ಚರಂಡಿ ಸೌಲಭ್ಯವಂತೂ ಇಲ್ಲವೇ ಇಲ್ಲ. ಇದರಿಂದಾಗಿ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು, ತಗ್ಗು ಪ್ರದೇಶಗಳಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದಾಗಿ ನಾಗರಿಕರಲ್ಲಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.

ಹುಸಿಯಾದ ನಿರೀಕ್ಷೆ: ನಗರಸಭೆಗೆ ಸೇರಿದರೆ, ಸೌಲಭ್ಯಗಳು ಸಿಕ್ಕಿ, ಜೀವನ ಉಜ್ವಲವಾಗುತ್ತದೆ ಎಂಬ ಭಾರಿ ನಿರೀಕ್ಷೆಗಳಿಂದ ಜನರು ಸಂತಸಪಟ್ಟಿದ್ದರು. ಆದರೆ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಅವರೆಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿದೆ.

ನಗರಸಭೆಗೂ ಗ್ರಾಪಂ ಸಿಬ್ಬಂದಿ: ಗ್ರಾಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ಸ್‌, ವಾಟರ್‌ಮನ್, ಸ್ವಚ್ಛತಾ ಸಿಬ್ಬಂದಿ, ಕರವಸೂಲಿಗಾರರು ಸೇರಿ ಇನ್ನೂ ಹಲವು ಹಂತಗಳ ಸಿಬ್ಬಂದಿಯನ್ನೇ ನಗರಸಭೆಯಲ್ಲೂ ಮುಂದುವರಿಸಲಾಗುತ್ತಿದೆ. ಆದರೆ, ಈ ಸಿಬ್ಬಂದಿಯ ನಿಗಾವಣೆಗಾಗಿ ಇರಬೇಕಾದ ಅಧಿಕಾರಿಗಳ ಕೊರತೆ ಇದೆ. ಹೆಚ್ಚುವರಿಯಾಗಿ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿಲ್ಲ. ಕಸವಿಲೇವಾರಿಗೆ ಅವಶ್ಯಕವಾದ ವಾಹನಗಳ ವ್ಯವಸ್ಥೆಯನ್ನೂ ಮಾಡಿಕೊಂಡಿಲ್ಲ. ಇದರಿಂದಾಗಿ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿ ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ.

ನಿವಾಸಿಗಳಿಂದಲೇ ಚರಂಡಿ ನಿರ್ಮಾಣ: ನಗರಸಭೆ ಅಧಿಕಾರಿಗಳು ತಿಂಗಳಿಗೊಮ್ಮೆ ವಾರ್ಡ್ ನಂ.28ಕ್ಕೆ ಸುಮ್ಮನೆ ಹಾಗೆ ಬಂದು, ಹೀಗೆ ಹೋಗುತ್ತಾರೆ. 100 ಅಡಿ ಉದ್ದವಿರುವ ಚರಂಡಿಯಲ್ಲಿ ಸಂಗ್ರಹವಾಗಿರುವ ಕಸ ತೆಗೆದು ಸ್ವಚ್ಛಗೊಳಿಸಿದಂತೆ ನಾಟಕವಾಡುತ್ತಾರೆಯೇ ವಿನಃ ಸಮಸ್ಯೆ ಪರಿಹರಿಸಿಲ್ಲ. ಇದನ್ನು ನೋಡಿ ಬೇಸತ್ತ ನಿವಾಸಿಗಳು, ಸ್ವತಃ ಜೆಸಿಬಿ ತರಿಸಿ, ಚರಂಡಿಯಲ್ಲಿ ಸಂಗ್ರಹವಾಗಿದ್ದ ಹೂಳು ಎತ್ತಿಸಿ, ತ್ಯಾಜ್ಯ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಜತೆಗೆ ಬಡಾವಣೆಯಲ್ಲಿ ಸಂಗ್ರಹವಾಗಿರುವ ಕಸ ತೆರವುಗೊಳಿಸಿ, ಪರಿಸರ ಸ್ವಚ್ಛವಾಗಿರುವಂತೆ ಕ್ರಮ ಕೈಗೊಂಡಿದ್ದಾರೆ.

ಮನವಿಪತ್ರಕ್ಕೂ ಪೌರಾಯುಕ್ತರ ಮೌನ: ಮಲ್ಲಾಪುರ ಗ್ರಾಮ ನಗರಸಭೆ ವಿಲೀನಗೊಂಡಿರುವುದನ್ನೇ ಅಧಿಕಾರಿಗಳು ಮರೆತಿರಬಹುದು ಎಂದು ಭಾವಿಸಿರುವ ಕೆಲ ಗ್ರಾಮಸ್ಥರು, ಕೆಲ ದಿನಗಳ ಹಿಂದೆಯಷ್ಟೆ ನಗರಸಭೆ ಪೌರಾಯುಕ್ತ ಅವರನ್ನು ಭೇಟಿಯಾಗಿ, ಅಸಮರ್ಪಕ ಕಸ ವಿಲೇವಾರಿ, ವಿದ್ಯುತ್ ದೀಪಗಳು ಕೆಟ್ಟಿರುವ ವಿಷಯವನ್ನು ಅವರ ಗಮನಕ್ಕೆ ತಂದಿದ್ದಲ್ಲದೆ, ಶುದ್ಧ ನೀರಿನ ಘಟಕ ಸ್ಥಾಪನೆ ಸೇರಿ ಹಲವು ಬೇಡಿಕೆಗಳು ಒಳಗೊಂಡ ಮನವಿ ಸಲ್ಲಿಸಿದ್ದರು. ಆದರೂ, ಪೌರಾಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಸರ್ಕಾರ ವಿಲೀನಗೊಂಡಿರುವ ನೂತನ ಗ್ರಾಪಂ ಪ್ರದೇಶಗಳಿಗೆ ಹೆಚ್ಚುವರಿ ಕೌನ್ಸಿಲರ್ ಆಗಿ ನನ್ನನ್ನು ನೇಮಕ ಮಾಡಿದೆ. ಜನರ ಸಮಸ್ಯೆ ಬಗ್ಗೆ ನಗರಸಭೆಗೆ ಮನವರಿಕೆ ಮಾಡಿದರೂ ಪರಿಹಾರ ದೊರಕುತ್ತಿಲ್ಲ. ಆಂಜಿನಾಮೂರ್ತಿ, ವಾಜರಹಳ್ಳಿ ಗ್ರಾಪಂ ಹೆಚ್ಚುವರಿ ಕೌನ್ಸಿಲರ್ ಗ್ರಾಮದ ವಿವಿಧೆಡೆ ಬಿದ್ದಿರುವ ಕಸದ ರಾಶಿ, ಮಣ್ಣು, ಕಸದಿಂದ ಕಟ್ಟಿಕೊಂಡಿರುವ ಚರಂಡಿ ಸ್ವಚ್ಛಗೊಳಿಸಿ, ಸಾಂಕ್ರಾಮಿಕ ಭೀತಿಯಿಂದ ನಮ್ಮನ್ನು ಕಾಪಾಡಿ. ಗಾಳಿ ಹನುಮಯ್ಯ, ಮಲ್ಲಾಪುರ ನಿವಾಸಿ ವಾರ್ಡ್‌ನ ಅನೇಕ ಬಡಾವಣೆಗಳಲ್ಲಿ ಬೀದಿದೀಪ ಇಲ್ಲ. ಇದು ಒಂದೆಡೆಯಾದರೆ, ಇನ್ನೊಂದೆಡೆ ಕೆಟ್ಟಿರುವ ಬೀದಿದೀಪಗಳನ್ನು ದುರಸ್ತಿ ಮಾಡಿಸುತ್ತಿಲ್ಲ. ಇದರಿಂದಾಗಿ ಕಳ್ಳಕಾಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಂತೆ ಆಗಿದೆ. ಸಂಜೆ ವೇಳೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಜಿ.ಮಾರಯ್ಯ, ಮಲ್ಲಾಪುರ ಕೂಡಲೇ ವಾರ್ಡ್‌ಗೆ ಭೇಟಿ ನೀಡಿ, ಅಲ್ಲಿರುವ ಮೂಲಸೌಕರ್ಯ ಸಮಸ್ಯೆಗಳೆಲ್ಲವನ್ನೂ ಪರಿಶೀಲಿಸಲಾಗುವುದು. ಅವನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಟಿ.ಮಂಜುನಾಥಸ್ವಾಮಿ, ಪೌರಾಯುಕ್ತ