ಜಿಲ್ಲೆ

ಕನಿಷ್ಠ ಅವಧಿಯಲ್ಲಿ 3,785 ಕಿ.ಮೀ. ಪಯಣ

ರಮೇಶ ಹಾರ್ಸಿಮನೆ ಸಿದ್ದಾಪುರ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್​ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಂದರೆ 19 ದಿನ 5 ಗಂಟೆಯಲ್ಲಿ 3,785 ಕಿ.ಮೀ. ಕ್ರಮಿಸುವ ಮೂಲಕ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಅತ್ತಿಗಾರಜಡ್ಡಿಯ ಡಾ. ಹರ್ಷವರ್ಧನ ನಾರಾಯಣ ನಾಯ್ಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದ್ದಾರೆ.

2019ರ ನವಂಬರ್ 14ರಂದು ಜಮ್ಮು ಮತ್ತು ಕಾಶ್ಮೀರ ಶ್ರೀನಗರದ ಲಾಲ್​ಚೌಕ್​ನಿಂದ ಬೆಳಗ್ಗೆ 7.30ಕ್ಕೆ ಹೊರಟು ಜಮ್ಮು- ಕಾಶ್ಮೀರ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮೂಲಕ ಕನ್ಯಾಕುಮಾರಿಗೆ 2019ರ ಡಿಸೆಂಬರ್ 3ರಂದು ಮಧ್ಯಾಹ್ನ 12 ಗಂಟೆಗೆ ತಲುಪಿದ್ದಾರೆ.

ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ‘ಸೆಲ್ಯೂಟ್ ಫಾರ್ ಅವರ್ ಸೋಲ್ಜರ್ಸ್’ ಎಂಬ ಘೊಷವಾಕ್ಯದೊಂದಿಗೆ ಅಭಿಯಾನ ನಡೆಸಿದ್ದರು. ಅಭಿಯಾನ ಆರಂಭಿಸುವ ಮೊದಲು 20 ದಿನಗಳ ಕಾಲ ಲಡಾಖ್​ನಲ್ಲಿ ಉಳಿದು ಬಾಡಿಗೆ ಸೈಕಲ್​ನಲ್ಲಿ ಪ್ರಪಂಚದ ಅತಿ ಎತ್ತರದ ರಸ್ತೆ ಎಂದು ಗುರುತಿಸಲ್ಪಟ್ಟ ಕರದುಂಗ್ಲಾ ರಸ್ತೆಯಲ್ಲಿ ತರಬೇತಿ (ಪ್ರ್ಯಾಕ್ಟಿಸ್) ಪಡೆದು ನಂತರ ವಿಶ್ವದ ಎರಡನೇ ಅತಿ ಶೀತ ಪ್ರದೇಶ ಎಂದು ಕರೆಸಿಕೊಳ್ಳುವ ದರಾಸ್​ನಿಂದ ಸೋನ ಮಾರ್ಗದಲ್ಲಿ 62 ಕಿ.ಮೀ. ಕ್ರಮಿಸಿ ಸೈಕಲ್​ಗೆ ನಿರ್ಬಂಧ ಇರುವ ದಾರಿಯಲ್ಲಿ ಸ್ಥಳೀಯರ ವಾಹನದಲ್ಲಿ ಸಂಚರಿಸಿದ್ದರು.

ಈ ದಾಖಲೆಯ ಅವಾರ್ಡ್ ಘೊಷಣೆಯಾಗಿದ್ದರೂ ಕರೊನಾ ಲಾಕ್​ಡೌನ್​ನಿಂದಾಗಿ ಸರ್ಟಿಫಿಕೇಟ್(ಪ್ರಮಾಣ ಪತ್ರ) ಇವರ ಕೈಗೆ ಸಿಗಲಿಲ್ಲವಾಗಿತ್ತು. ಈಗ ಒಂದು ವಾರದ ಹಿಂದೆ ಕೋರಿಯರ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾದ ಪ್ರಮಾಣ ಪತ್ರ ಬಂದು ತಲುಪಿದೆ ಎಂದು ಡಾ. ಹರ್ಷವರ್ಧನ ತಿಳಿಸಿದ್ದಾರೆ.

ಹುಬ್ಬಳ್ಳಿ ಕಿಮ್ಸ್​ನಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಡಾ. ಹರ್ಷವರ್ಧನ ಅವರು ಎಂ.ಡಿ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇವರು ಅತ್ತಿಗಾರಜಡ್ಡಿಯ ಕೃಷಿಕ ನಾರಾಯಣ ನಾಯ್ಕ ಹಾಗೂ ಪ್ರೇಮಾ ನಾರಾಯಣ ನಾಯ್ಕ ಅವರ ಪುತ್ರ.

ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ ಆಂದೋಲನ ನನಗೆ ಅಭಿಯಾನ ಆರಂಭಿಸುವುದಕ್ಕೆ ಸ್ಪೂರ್ತಿ ನೀಡಿತು. ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಸೆಲ್ಯೂಟ್ ಫಾರ್ ಅವರ್ ಸೋಲ್ಜರ್ಸ್ ಎನ್ನುವ ಘೊಷ ವಾಕ್ಯದೊಂದಿಗೆ ಅಭಿಯಾನ ನಡೆಸಿದ್ದೇನೆ. ಅಭಿಯಾನದ ಸಂದರ್ಭದಲ್ಲಿ ಸೈನಿಕರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿರುವು ಅವಿಸ್ಮರಣೀಯವಾಗಿದೆ.| ಡಾ. ಹರ್ಷವರ್ಧನ ಅತ್ತಿಗಾರಜಡ್ಡಿ