ಹುಬ್ಬಳ್ಳಿ: ಮಾಸಿಕ ಕನಿಷ್ಠ 12 ಸಾವಿರ ರೂ. ಗೌರವ ಧನ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಾವು ಸರಿಯಾದ ವೇತನ, ರಕ್ಷಣೆ ಇಲ್ಲದೇ, ಅವ್ಯವಸ್ಥೆಯ ಸಾಫ್ಟವೇರ್ನಿಂದ ಬಳಲಿ ಬೆಂಡಾಗಿದ್ದೇವೆ. ದುಡಿಮೆಗೆ ತಕ್ಕ ಸಂಬಳವಿಲ್ಲದೇ ಹೈರಾಣಾಗಿದ್ದೇವೆ. ಹಾಗಾಗಿ, ಸರ್ಕಾರ ಕೂಡಲೆ ಗೌರವ ಧನ ಮತ್ತು ಪ್ರೋತ್ಸಾಹಧನ ಸೇರಿ ಮಾಸಿಕ ಕನಿಷ್ಠ 12,000 ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸೋಂಕಿತರ ನಡುವೆಯೇ ಕರ್ತವ್ಯ ಪಾಲನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ, ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಕರೊನಾ ಸೋಂಕಿಗೆ ತುತ್ತಾದ ಆಶಾಗಳಿಗೆ ಸೂಕ್ತ ಚಿಕಿತ್ಸೆ, ಪರಿಹಾರ ನೀಡಬೇಕು. ಅದುವರೆಗೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಕ್ಷಣ ಕ್ರಮ ಕೈಗೊಳ್ಳಿ
ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಕೆಲಸ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷೆ ಭುವನಾ ಬಳ್ಳಾರಿ ಮಾತನಾಡಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮನವಿ ಸಲ್ಲಿಸಿದರೂ ಬೇಡಿಕೆಗಳ ಬಗ್ಗೆ ರ್ಚಚಿಸಲು ಸಭೆ ಕೂಡ ಕರೆಯುತ್ತಿಲ್ಲ. ಇದು ಕರೊನಾ ಸಮಯದಲ್ಲಿ ಮುಂದಿಟ್ಟ ಬೇಡಿಕೆಯಲ್ಲ. ಕಳೆದ ಜನವರಿಯಲ್ಲಿ ನಡೆದ ಚಳವಳಿಯ ನಂತರ 10 ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಸರ್ಕಾರ ಈಗಲಾದರೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರೇಮಾ ಕಬ್ಬೂರ, ಶಾಂತಾ ಚವ್ಹಾಣ, ಸಂಗೀತಾ ಗೊರವನಕೊಳ್ಳ, ಕವಿತಾ ಪವಾರ, ಪ್ರೇಮಾ ದಿವಟಗಿ, ಸ್ವಪ್ನಾ ಸುಳ್ಳದ, ನಿರ್ಮಲಾ ಕಾಳೆ, ಮಂಜುಳಾ, ಚಾಂದ್ಬಿ, ಸಾವಿತ್ರಿ ತಮ್ಮಣ್ಣವರ, ರೂಪಾ ಅನಂತಪುರ, ಸೀತಾ ಮಾಳೋದೆ, ಇತರರು ಪಾಲ್ಗೊಂಡಿದ್ದರು.