ಜಿಲ್ಲೆ

ಕನಸವಾಡಿ ಶ್ರೀ ಕ್ಷೇತ್ರ ಮಹಿಮೆ, ದೊಡ್ಡಬಳ್ಳಾಪುರ ತಾಲೂಕು ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇಗುಲ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಬ್ರಹ್ಮಾಂಡದಲ್ಲಿನ ಸಕಲ ಜೀವರಾಶಿಗಳನ್ನು ಅಂಕೆಯಲ್ಲಿಟ್ಟುಕೊಂಡು ಕಾಲಕಾಲಕ್ಕೆ ಅವರ ಕರ್ಮಾನುಸಾರವಾಗಿ ನಿಯೋಜಿಸುವ ನವಗ್ರಹಗಳಲ್ಲಿ ಶನಿಗ್ರಹ ಅತ್ಯಂತ ಪ್ರಭಾವಶಾಲಿ ಎಂಬುದು ಪುರಾಣ ಕಾಲದಿಂದಲೂ ನಂಬಲಾಗಿದೆ. ಇಂಥ ಮಹಾನ್ ಮಹಿಮ ಶನಿದೇವ ನೆಲೆನಿಂತಿರುವ ದೊಡ್ಡಬಳ್ಳಾಪುರ ತಾಲೂಕು ಚಿಕ್ಕಮಧುರೆಯ ಕನಸವಾಡಿ ಶ್ರೀ ಶನಿಮಹಾತ್ಮ ದೇಗುಲ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.

ಸಹಸ್ರಾರು ವರ್ಷದ ಧಾರ್ಮಿಕ ಇತಿಹಾಸವಿರುವ ಈ ಪುಣ್ಯಕ್ಷೇತ್ರ ರಾಜ್ಯದಲ್ಲಿಯೇ ವಿಶಿಷ್ಟ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ರಾಜ್ಯ ಅಲ್ಲದೆ ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಶನಿದೇವರ ಅನುಗ್ರಹಕ್ಕಾಗಿ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ.

ಶತಮಾನಗಳ ಹಿಂದೆ ನಿರ್ಜನ ಪ್ರದೇಶದಂತಿದ್ದ ಕನಸವಾಡಿ ನಗರೀಕರಣದತ್ತ ವೇಗವಾಗಿ ತೆರೆದುಕೊಳ್ಳುತ್ತಿದ್ದು, ಈ ಪುಣ್ಯ ಕ್ಷೇತ್ರವೂ ಅಷ್ಟೇ ವೇಗವಾಗಿ ಪ್ರವರ್ಧಮಾನಕ್ಕೆ ಬಂದಿದೆ.

ಶಿಲ್ಪಶಾಸ್ತ್ರದ ಪ್ರಕಾರ ಗರ್ಭಗುಡಿ, ಮುಖಮಂಟಪ, ಮಹಾಮಂಟಪ, ಮಹಾದ್ವಾರ ಗೋಪುರ, ಗರ್ಭಗುಡಿಯ ವಿಮಾನಗೋಪುರ ಇನ್ನಿತರ ಶಿಲ್ಪಕಲಾಕೃತಿಗಳೊಂದಿಗೆ ವಿಶೇಷವಾಗಿ ನಿರ್ಮಾಣಗೊಂಡಿದೆ. ಪ್ರಸ್ತುತ ನಾಲ್ಕು ಕಡೆ ಗೋಪುರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ದೇಗುಲದ ಅಂದ ಇಮ್ಮಡಿಗೊಳಿಸುತ್ತಿದೆ.

ಮಾ.12ಕ್ಕೆ ಜಾತ್ರಾ ಮಹೋತ್ಸವ: ಪ್ರತಿ ವರ್ಷದಂತೆ ಈ ಬಾರಿಯೂ ಮಾ.12 ರಂದು ಶ್ರೀ ಶನಿದೇವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಸಾವಿರಾರು ಭಕ್ತರು ಸೇರುವ ಹಿನ್ನೆಲೆಯಲ್ಲಿ ಈಗಾಗಲೇ ಮರಗಳ ಬ್ಯಾರಿಕೇಡ್‌ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಸರದಿ ಸಾಲಿನಲ್ಲಿ ಭಕ್ತರಿಗೆ ದೇವರ ದರ್ಶನ ಪಡೆಯಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ಶನಿಮಹಾತ್ಮ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಿದ್ಧತೆ ಆರಂಭಿಸಿದೆ. ಮಾ.12 ರಂದು ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಅಕ್ಕಪಕ್ಕದ ಜಿಲ್ಲೆ, ನೆರೆ ರಾಜ್ಯದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಮಹೋತ್ಸವಕ್ಕೆ ಈ ಬಾರಿ ಮೆರುಗು ನೀಡಲು ಸರ್ವ ಸಿದ್ಧತೆ ನಡೆಯುತ್ತಿದೆ.

ಮಹಾಮಹಿಮನ ಪೂಜಾ ಮಹತ್ವ: ತಿಳಿದೋ ತಿಳಿಯದೋ ಮಾಡಿದ ಪಾಪ ಪರಿಹಾರಕ್ಕಾಗಿ ಭಕ್ತರು ಶ್ರೀ ಶನಿಮಹಾತ್ಮನ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರಿಂದ ಪಾಪ ವಿಮೋಚನೆಯಾಗಿ ಸನ್ಮಾರ್ಗದಲ್ಲಿ ನಡೆಯಲು ಮಹಾಮಹಿಮ ಶನಿಮಹಾತ್ಮ ಪ್ರೇರಣೆಯಾಗುತ್ತಾನೆ ಎಂಬುದು ಬರುವ ಭಕ್ತರ ನಂಬಿಕೆಯಾಗಿದೆ.

ಪ್ರತಿ ಶನಿವಾರ ವಿಶೇಷ ಪೂಜೆ: ಶನಿಮಹಾತ್ಮನಿಗೆ ಶನಿವಾರ ಶ್ರೇಷ್ಠದಿನ ಎಂಬ ವಾಡಿಕೆ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಈ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಅಭಿಷೇಕ ನಡೆಯುತ್ತವೆ. ಪ್ರತಿ ಶನಿವಾರ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಈ ಬಾರಿಯ ಜಾತ್ರಾ ಮಹೋತ್ಸವವೂ ಶನಿವಾರವೇ ನಿಗದಿಯಾಗಿರುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇಗುಲದ ಟ್ರಸ್ಟ್ ತಿಳಿಸಿದೆ.

ಅನ್ನದಾಸೋಹ: ಪ್ರತಿ ದಿನ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನದಾಸೋಹ ನಡೆಸಿಕೊಂಡು ಬರಲಾಗುತ್ತಿದೆ.

ಬಡರೈತನಿಗೆ ಸ್ವಾಮಿ ದಿವ್ಯ ದರ್ಶನ: ಈ ಹಿಂದೆ ಗಂಗಹನುಮಯ್ಯನೆಂಬ ಕನಸವಾಡಿಯ ಬಡ ರೈತನಿಗೆ ಶ್ರೀ ಶನಿಮಹಾತ್ಮ ಸ್ವಾಮಿ ಬಾಲಕನ ರೂಪದಲ್ಲಿ ದರ್ಶನ ಕೊಟ್ಟು ಅನುಗ್ರಹಿಸಿದನು. ನೀಲಗಿರಿ ತೋಪಿನಲ್ಲಿ ದೇಗುಲ ನಿರ್ಮಾಣ ಮಾಡುವಂತೆ ಪ್ರೇರಣೆ ನೀಡಿದನು. ದೊಡ್ಡಬಳ್ಳಾಪುರದಲ್ಲಿ ರಾಮಯ್ಯ ಎಂಬ ಭಕ್ತನಿರುವನು, ಆತನಿಗೆ ನನ್ನ ಆಜ್ಞೆ ತಿಳಿಸು ಎಲ್ಲವೂ ಮಂಗಳವಾಗುವುದು ಎಂದು ತಿಳಿಸಿ ಅದೃಶ್ಯವಾದನು. ಅಲ್ಲಿಂದಲೇ ಈ ಪುಣ್ಯ ಕ್ಷೇತ್ರ ಪ್ರಚಲಿತಕ್ಕೆ ಬಂತು ಎಂಬ ಐತಿಹ್ಯವಿದೆ.

ರಾಜ್ಯದಲ್ಲಿಯೇ ಪ್ರಮುಖ ಶನಿದೇವರ ದೇಗುಲವಾಗಿ ಪ್ರಸಿದ್ಧಿ ಪಡೆದಿದೆ. ಸಹಸ್ರಾರು ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಭಕ್ತರ ಸಂಕಷ್ಟ ಪರಿಹರಿಸುವ ಶ್ರೀ ಶನಿದೇವರಿಗೆ ಪ್ರತಿ ದಿನ ಪೂಜಾಕಾರ್ಯ ನಡೆಯುತ್ತದೆ. ಪ್ರತಿ ಶನಿವಾರ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತದೆ. ಪ್ರಕಾಶ್, ದೇಗುಲ ಟ್ರಸ್ಟ್ ಅಧ್ಯಕ್ಷ ಕೋವಿಡ್ ಕಾರಣದಿಂದ ಕಳೆದೆರಡು ವರ್ಷದಿಂದ ಜಾತ್ರಾಮಹೋತ್ಸವ ಕಳೆಗುಂದಿತ್ತು. ಈ ಬಾರಿ ಶನಿವಾರವೇ ಉತ್ಸವ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ರಾಜ್ ಕುಮಾರ್ ಧರ್ಮದರ್ಶಿ

ಮಾರ್ಗ: ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ಯಲಹಂಕ ರಾಜಾನುಕುಂಟೆ ಮೂಲಕ ಮಧುರೆ ತಲುಪಬಹುದು, ಹಾಗೆಯೆ ಜಾಲಹಳ್ಳಿ ಕ್ರಾಸ್ ಮಾರ್ಗದಿಂದ ಹೆಸರುಘಟ್ಟ ಮೂಲಕ ಮಧುರೆ ಪ್ರವೇಶಿಸಬಹುದು. ನೆಲಮಂಗಲ, ತುಮಕೂರು ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರ ಮಾರ್ಗದ ಮೂಲಕ ಶ್ರೀ ಕ್ಷೇತ್ರ ತಲುಪಬಹುದು.