ಚಿತ್ರದುರ್ಗ: ಶೋಷಣೆ ವಿರುದ್ಧ ಧ್ವನಿಯಾಗಿ, ಸಮಾಜದ ಪಿಡುಗುಗಳನ್ನು ತೊಲಗಿಸಲು ಸರ್ವರಿಗೂ ಅರ್ಥವಾಗುವಂತೆ ಕೀರ್ತನೆಗಳ ಮೂಲಕ ಪರಿವರ್ತನೆಗೆ ಶ್ರಮಿಸಿದ ದಾಸವರೇಣ್ಯ ಕನಕದಾಸರು ವಿಶ್ವಕ್ಕೆ ದಾರಿ ದೀಪವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘದಿಂದ ತರಾಸು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಯಾರನ್ನೋ ಮೆಚ್ಚಿಸಲು ಕನಕದಾಸರು ಕೀರ್ತನೆಗಳನ್ನು ರಚಿಸಲಿಲ್ಲ. ಜನರ ಒಳಿತಿಗಾಗಿ, ದೈವಕ್ಕೆ ಸಮರ್ಪಿಸಿದ್ದರಿಂದಾಗಿ ಶ್ರೀಕೃಷ್ಣ ಪರಮಾತ್ಮನಿಗೆ ಹತ್ತಿರವಾದರು. ದೇವರ ದರ್ಶನಕ್ಕೆ ದೇಗುಲಕ್ಕೆ ಹೋಗಬೇಕಿಲ್ಲ. ಪರಿಶುದ್ಧ ಮನಸ್ಸು, ಭಕ್ತಿಗೆ ಎಲ್ಲಿದ್ದರೂ ಒಲಿದು, ದರ್ಶನ ನೀಡುತ್ತಾನೆ ಎಂಬುದಕ್ಕೆ ಕಿಂಡಿಯಿಂದ ದರ್ಶನ ಭಾಗ್ಯ ಪಡೆದ ಅವರೇ ಉತ್ತಮ ನಿದರ್ಶನ ಎಂದರು.
ಜಾತಿ-ಭೇದಗಳ ತಾರತಮ್ಯ ನಿವಾರಿಸಿ, ಸಮಾನತೆಯ ಸಮಾಜಕ್ಕಾಗಿ ಉತ್ತಮ ಸಾಹಿತ್ಯ ರಚಿಸಿದರು. ಊರೂರು ಅಲೆದು ಜನರಲ್ಲಿ ಜಾಗೃತಿ ಮೂಡಿಸಿದರು. ಅವರ ಬದುಕಿನ ಮಾರ್ಗವೂ 5 ಶತಮಾನಗಳ ನಂತರವೂ ಆದರ್ಶವಾಗಿದ್ದು, ನಡೆ-ನುಡಿಯಲ್ಲೂ ಕನಕದಾಸರಂತೆ ಬಾಳಿದಾಗ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಕುಲಪತಿ ಸುನಂದಮ್ಮ ಮಾತನಾಡಿ, ಕನಕದಾಸರ ನಡೆ-ನುಡಿ ಒಂದೇ ಆಗಿತ್ತು. ಹರಿ-ಹರ ತತ್ವವನ್ನು ಒಟ್ಟುಗೂಡಿಸಿ ಸಾಹಿತ್ಯ ರಚಿಸಿದರು. ಜಾತಿ, ಮತ, ಪಂಥಗಳನ್ನು ಮೀರಿ ಜನರು ಬಾಳುವಂತೆ ಜಾಗೃತಿ ಮೂಡಿಸಿದರು. ಉತ್ಸವಕ್ಕೆ ಮಾತ್ರವಲ್ಲ, ಅವರ ತತ್ವಾದರ್ಶ ಪಾಲನೆಗೂ ಆದ್ಯತೆ ನೀಡಿದಾಗ ಸಮಾಜ ಬದಲಾವಣೆ ಸಾಧ್ಯ ಎಂದು ಸಲಹೆ ನೀಡಿದರು.
ಅಭಿವೃದ್ಧಿ ಎಂದರೆ ಮಂದಿರ, ಭವನಗಳ ನಿರ್ಮಾಣ ಮಾಡುವುದಲ್ಲ. ಅಧಿಕಾರ ಸಿಕ್ಕಾಗ, ತೆರಿಗೆ ರೂಪದಲ್ಲಿ ಸಾರ್ವಜನಿಕರು ಕಟ್ಟಿದ್ದು, ಜನಸಾಮಾನ್ಯರ ಕಲ್ಯಾಣಕ್ಕೆ ಉಪಯೋಗ ಆಗಬೇಕು. ಇದೇ ಅಂಶ ಕನಕದಾಸರ ಕೀರ್ತನೆಗಳಲ್ಲಿ ಅಡಗಿದೆ ಎಂದರು.
ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ: ನಗರದ ಕುರುಬರ ವಿದ್ಯಾರ್ಥಿನಿಲಯ ಶಿಥಿಲಗೊಂಡಿದ್ದು, ನೆಲಸಮಗೊಳಿಸಿ ನೂತನ ಕಟ್ಟಡ, ಸಮುದಾಯ ಭವನ, ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. 5 ಎಕರೆ ಜಮೀನು ಮಂಜೂರಾತಿ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿದರು.
ಸಾಧಕರಿಗೆ ಸನ್ಮಾನ: ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಮಲ್ಲಣ್ಣ, ದುರುಗೇಶಪ್ಪ, ಮಹ್ಮದ್ ನೂರುಲ್ಲಾ, ಸಿದ್ದರಾಜು ಜೋಗಿ, ದೀಪು ಅವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರಾದ ಎಂ.ನಿಶಾನಿ ಜಯಣ್ಣ, ಬಿ.ಎಚ್.ಹನುಮಂತಪ್ಪಗೌಡ, ಡಾ.ದೇವರಾಜ್, ಶರತ್ ಪಿ. ಶ್ರೀನಿವಾಸ ಕೋರಿ, ಸಿ.ಎಂ.ಚೈತನ್ಯಾ ಅವರನ್ನು ಸನ್ಮಾನಿಸಲಾಯಿತು.
ಅದ್ದೂರಿ ಮೆರವಣಿಗೆ: ಜಯಂತಿ ಅಂಗವಾಗಿ ನಗರದ ಕನಕ ವೃತ್ತದ ಕನಕದಾಸರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ವೇಳೆ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾಗಿ ತರಾಸು ರಂಗಮಂದಿರದವರೆಗೆ ಸಾಗಿತು. ಜನಪದ ಕಲಾತಂಡಗಳು ಮೆರುಗು ನೀಡಿದರು. ಕನಕದಾಸರು, ಸಂಗೋಳ್ಳಿ ರಾಯಣ್ಣ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕ ಮಹನೀಯರ ವೇಷಭೂಷಣದೊಂದಿಗೆ ಮಕ್ಕಳು ಆಕರ್ಷಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಎಸಿ ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಅಬಕಾರಿ ಡಿಸಿ ಮಾದೇಶ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಲ್ಲಿಕಾರ್ಜುನ್, ಕುರುಬರ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ನಗರಸಭೆ ಸದಸ್ಯರಾದ ಪಿ.ಕೆ.ಮೀನಾಕ್ಷಿ, ಪೂಜಾ ಮಂಜುನಾಥ್, ಮಲ್ಲಿಕಾರ್ಜುನ, ಮಾಜಿ ಸದಸ್ಯ ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಮುಖಂಡರಾದ ಆರ್.ಮಂಜುನಾಥ್, ಮಂಜಪ್ಪ ಇತರರಿದ್ದರು.