ಜಿಲ್ಲೆ

ಕನಕದಾಸರ ತತ್ವ ಆದರ್ಶಗಳನ್ನ ನಾವೆಲ್ಲರೂ ಅಳವಡಿಸಿಕೊಳ್ಳಬೇಕು:ಕೆ.ಟಿ. ಶಾಂತಲಾ

   ಹಾಸನ; ಪ್ರತಿಯೊಬ್ಬರು ನಾವು ಮಾಡುವಂತಹ ಕೆಲಸ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ದೇವರು ಒಲಿಯುತ್ತಾನೆ ಎಂಬುದಕ್ಕೆ ಕನಕದಾಸರೇ ಉದಾಹರಣೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಾಸ ಶ್ರೇಷ್ಠರಾದ ಕನಕದಾಸರ 537ನೇ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಕನಕದಾಸರಿಗೆ ಯಾವುದೇ ಕೀಳರಿಮೆ ಇರಲಿಲ್ಲ, ಹುಡುಕಿದರೆ ದೇವರೇ ಸಿಗುತ್ತಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ತತ್ವ ಆದರ್ಶಗಳನ್ನ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹಿಂದಿನ ಕಾಲದಲ್ಲಿ ಸಂತರು, ದಾಸ ಪರಂಪರೆಯಿಂದ ಬಂದಿರುವಂತಹವರು ದೇವರ ಅಮಲಿನಲ್ಲಿ ಇರುತ್ತಿದ್ದರು. ಎಲ್ಲರಿಗೂ ದೇವರು ಒಲಿಯಲ್ಲಿ ಎಂಬುದು ಅವರ ಬಯಕೆ ಆಗಿತ್ತು. ಜೊತೆಗೆ ಅವರು ಕಾಯಕ ಮತ್ತು ಕೆಲಸದಲ್ಲಿ ನಿಷ್ಠೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ಕೆಲಸ ಮಾಡಿದರೆ ತಮಗೆ ಯಶಸ್ಸು ಸಿಗಲಿದೆ ಎಂದು ಕಿವಿಮಾತು ಹೇಳಿದರು

ನಗರ ಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ, ಸರಳ ವ್ಯಕ್ತಿತ್ವದ ಕನಕದಾಸರು ಎಲ್ಲರಿಗೂ ಕೂಡ ಮಾದರಿ. ಅವರ ಸರಳತೆಯನ್ನ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಮಹನೀಯರ ಜಯಂತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಇದನ್ನ ಎಲ್ಲರೂ ಒಗ್ಗಟ್ಟಿನಿಂದ ಮಾಡುವ ಮೂಲಕ ಅವರ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹುಟ್ಟು ಮತ್ತು ಸಾವುನಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಆದರೆ ಚುನಾವಣೆ ಮತ್ತು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಬಂದಾಗ ಜಾತಿಗೆ ಸೀಮಿತಗೊಳಿಸುತ್ತಾರೆ. ಕನಕದಾಸರು ಒಂದು ಜನಾಂಗಕ್ಕೆ ಸೀಮಿತರಲ್ಲ ಅವರು ಹಾಕಿಕೊಟ್ಟಂತಹ ಸರಳ, ಸುಂದರ ಸಮಾಜ ನಿರ್ಮಾಣ ಮಾಡುವ ಕಾಯಕಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದಂತಹ ಶಿಕ್ಷಕ ಮಡಲು ಪರಮೇಶ್ ಮಾತನಾಡಿ, ಕನಕದಾಸರು ಸಮಾಜದ ಜಾಗೃತಿಗಾಗಿ ಜನರ ನೋವನ್ನ ಅರಿತು, ಮೌಡ್ಯತೆಯ ವಿರುದ್ಧ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಕಣ್ಣು ತೆರೆಸುವ ಕೆಲಸವನ್ನು ಮಾಡಿದ್ದಾರೆ. ಅವರ ಒಂದೊಂದು ಕೀರ್ತನೆಗಳು ಕೂಡ ಪ್ರಸ್ತುತ ಸಮಾಜ ವಾಸ್ತವವನ್ನು ತೆರೆದಿಡುತ್ತವೆ ಎಂದು ಹೇಳಿದರು.

15 ಮತ್ತು 16ನೇ ಶತಮಾನದಲ್ಲಿ ಈ ನಾಡಿನಲ್ಲಿ ಭಕ್ತಿಯ ಪರಂಪರೆಯನ್ನ ಹುಟ್ಟು ಹಾಕಿ ತಮ್ಮ 361 ಕೀರ್ತನೆಗಳ ಮೂಲಕ ಸಮಾಜದ  ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುವುದರ, ಜೊತೆಗೆ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರವಾದದ್ದು ಎಂದು ಬಣ್ಣಿಸಿದರು.

ಕನ್ನಡ ನಾಡಿನ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಕನಕದಾಸ ಅವರ ತಂದೆ ಡಣ್ಣಾಯಕನಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಲವು ವರ್ಷಗಳ ಮಕ್ಕಳಿಲ್ಲದೆ ಇದ್ದ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ಹರಿಕೆಯಿಂದ ಹುಟ್ಟಿದ್ದರಿಂದ ಕನಕದಾಸರಿಗೆ ತಿಮ್ಮಪ್ಪ ನಾಯಕ ಎಂದು ಹೆಸರಿಡಲಾಯಿತು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಆಶಯದಲ್ಲಿ ಎಲ್ಲಾ ವಿದ್ಯೆಗಳನ್ನು ಕಲಿತು. ತಂದೆಯು ಕೂಡ ಕಾಲವಾದ ನಂತರ ಅವರ ಉತ್ತರಾಧಿಕಾರಿಯಾಗಿ ಕರ್ತವ್ಯ ಮಾಡುತ್ತಿದ್ದರು ಎಂದು ಅವರ ಬಾಲ್ಯವನ್ನ ಮೇಲುಕು ಹಾಕಿದರು.

ರಂಗನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಮಯದಲ್ಲಿ ಸಿಕ್ಕ ನಿಧಿಯನ್ನು ಸಮಾಜದ ಉದ್ದಾರಕ್ಕಾಗಿ ಬಳಸಿದ್ದರಿಂದ ಕನಕ ನಾಯಕ ಎಂದು ಜನರು ಪ್ರೀತಿಯಿಂದ ಕರೆದರು.ತನ್ನ ಎಲ್ಲಾ ಸಂಪತ್ತನ್ನು ಬಿಟ್ಟು ವ್ಯಾಸರಾಯರಿಂದ ಭಿಕ್ಷೆ ಪಡೆದು ಶಿಷ್ಯರಾಗಿ ಬಿಕ್ಷಾಟನೆ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಲು ಮುಂತಾದರು ಎಂದು ಹೇಳಿದರು.

ಕನಕದಾಸರು ಮತ್ತು ಪುರಂದರದಾಸರು ಸಾಹಿತ್ಯದ ಎರಡು ಅಶ್ವಿನಿ ದೇವತೆಗಳು ಎಂದು ಕರೆಯುತ್ತಾರೆ. ಇಬ್ಬರು ದಾಸರು ಜಾತಿ, ಧರ್ಮ ಇವುಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕವೇ ಜನರಲ್ಲಿ ಜಾಗೃತಿ ಮೂಡಿಸಿದರು. ಕನಕದಾಸರು ಉಡುಪಿಯಲ್ಲಿ ಕೃಷ್ಣನ ದರ್ಶನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಕೀರ್ತನೆ ಮೂಲಕ ದೇವರನ್ನು ಹೋಲಿಸಿಕೊಂಡಂತಹ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು .

ಕನಕದಾಸರು ಕೀರ್ತನೆ ಜೊತೆಗೆ ಸಾಹಿತ್ಯ ವಲಯಕ್ಕೆ ತಮ್ಮ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮದನ್ಯ ಚರಿತ್ರೆ, ಹರಿಭಕ್ತ ಸಾರ ನಾಲ್ಕು ಮಹಾನ್ ಕೃತಿಗಳನ್ನು ರಚಿಸಿದ್ದಾರೆ. ಈ ನಾಡು ಕಂಡ ಶ್ರೇಷ್ಠ ದಾಸ ಮತ್ತು ದಾಸನಿಕರಲ್ಲಿ ಕನಕದಾಸರು ಅಗ್ರಸ್ಥಾನದಲ್ಲಿ ಇರುತ್ತಾರೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ ಗೌಡ ಮಾತನಾಡಿ, ಸರ್ಕಾರ ಮತ್ತು ಇಲಾಖೆಗಳು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಇದನ್ನು ಬಳಸಿಕೊಳ್ಳಬೇಕು ಆದರೆ ಬಳಸಿಕೊಳ್ಳದೆ ಇಲಾಖೆಯನ್ನ ದೂರುವುದು ಸರಿಯಲ್ಲ. ಮಕ್ಕಳ ಭಾಗವಹಿಸಿಕೆ ದಾಸನಿಕರ ಚಿಂತನೆಗಳನ್ನ ತಮ್ಮಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ನಾಡು ಮತ್ತು ಸಾಹಿತ್ಯ ಜಗತ್ತಿಗೆ ದಾಸ ಮತ್ತು ವಚನ ಸಾಹಿತ್ಯ ಎರಡು ಮುಕುಟ ಮಣಿಗಳಿದ್ದಂತೆ. ದಾಸ ಸಾಹಿತ್ಯ ಹರಿಭಕ್ತ ಸಾರವನ್ನು ತಿಳಿಸಿದರೆ, ವಚನ ಸಾಹಿತ್ಯ ಶಿವನ ಭಕ್ತಿಯನ್ನ ತಿಳಿಸುತ್ತದೆ. ಕನಕದಾಸರು ತಳ ಸಮುದಾಯದಲ್ಲಿ ಹುಟ್ಟಿ ದಾಸ ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಾಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ತಾರಾನಾಥ್, ಸಮಾಜದ ಮುಖಂಡರಾದ ನವಿಲೇ ಅಣ್ಣಪ್ಪ, ನಿಂಗೇಗೌಡ, ಸತೀಶ್, ಸೇರಿದಂತೆ ಇತರರು ಇದ್ದರು

ಮೆರವಣಿಗೆ ಚಾಲನೆ :

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕನಕದಾಸರ ಜಯಂತಿ ಆಚರಣೆ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಎಸಿಡಿ. ಕೆ.ಟಿ. ಶಾಂತಲಾ, ಜಿಪಂ.ಸಿಇಒ.ಬಿ.ಆರ್. ಪೂರ್ಣಿಮಾ, ನಗರ ಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಎಸ್‌ಪಿ.ಮೊಹಮ್ಮದ್ ಸುಜೀತಾ, ಲಿಂಗೇಗೌಡ, ನವಿಲೇ ಅಣ್ಣಪ್ಪ, ಸಣ್ಣೇಗೌಡ, ಎಚ್.ಪಿ. ತಾರನಾಥ್ ಇತರರು ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಇದೆ ವೇಳೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.