ಜಿಲ್ಲೆ

ಕನಕದಾಸರ ಜೀವನ ಸಾರವನ್ನು ಅನುಸರಿಸೋಣ

ಚಾಮರಾಜನಗರ: ಕನಕದಾಸರು ಸಮಾಜನದಲ್ಲಿರುವಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದು, ಅವರ ಜೀವನ ಸಾರವನ್ನು ನಾವೆಲ್ಲರೂ ಅನುಸರಿಸೋಣ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ತತ್ವ, ಆದರ್ಶ ಮತ್ತು ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಿದೆ. ವಾಲ್ಮೀಕಿ ಸಮುದಾಯದ ಮುಖಂಡರು ವಾಲ್ಮೀಕಿ ಅವರ ಪುತ್ಥಳಿ ನಿರ್ಮಿಸಲು ಮನವಿ ಮಾಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ವಾಲ್ಮೀಕಿ, ಕನಕದಾಸ ಮತ್ತು ಭಗೀರಥರ ಪುತ್ಥಳಿಯ ನಿರ್ಮಾಣಕ್ಕೆ ನಾನೇ ಬಂದು ಗುದ್ದಲಿ ಪೂಜೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಈ ನಿಟ್ಟನಲ್ಲಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಸಮಾಜದ ಮೇಲು, ಕೀಳು ಹಾಗೂ ಮೂಢನಂಬಿಕೆ ಹೋಗಲಾಡಿಸಲು ಕನಕದಾಸರು ಶ್ರಮಿಸಿದರು. ಅವರ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಎಂ.ಮಂಜುನಾಥ್ ಮಾತನಾಡಿ, ಕನಕದಾಸರು ಬರೆದಂತಹ ರಾಮಧಾನ್ಯಚರಿತ, ಹರಿಭಕ್ತಸಾರ ಹಾಗೂ ಅವರ ಅನೇಕ ಕೃತಿಗಳು ಮನುಷ್ಯಪರವಾಗಿದೆ. ಅವರ ಕೃತಿಗಳನ್ನು ಓದುವ ಮೂಲಕ ಅವರ ಚಿಂತನೆಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಉಮೇಶ್, ಮುಖಂಡ ಬೆಳ್ಳೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ಗಮನಸೆಳೆದ ಮೆರವಣಿಗೆ:

ಭಕ್ತಶ್ರೇಷ್ಠ ಶ್ರೀಕನಕದಾಸರ ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾವಚಿತ್ರ ಮೆರವಣಿಗೆ ಗಮನಸೆಳೆಯಿತು. ನಗರದ ಪ್ರವಾಸಿ ಮಂದಿರದಲ್ಲಿ ಪ್ರಾಂಭವಾದ ಮೆರವಣಿಗೆಗೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಬಳಿಕ ಸಾಗಿದ ಮೆರವಣಿಗೆ ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿದ ಮೆರವಣಿಗೆ ವೇದಿಕೆ ಕಾರ್ಯಕ್ರಮ ನಡೆದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಮುಕ್ತಾಯವಾಯಿತು. ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ, ನಂದಿಕಂಬ ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯುವಕರು ಮೆರವಣಿಗೆ ಉದ್ದಕ್ಕೂ ೋಷಣೆ ಕೂಗಿ, ಕುಣಿದು ಕುಪ್ಪಳಿಸಿದರು.