ಮದ್ದೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ಕದಲೂರು ರಾಮಕೃಷ್ಣ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದೇಶ ಪತ್ರ ವಿತರಿಸಿ ಮಾತನಾಡಿದರು. 23 ವರ್ಷಗಳಿಂದ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕದಲೂರು ರಾಮಕೃಷ್ಣ ಅವರು ಪಕ್ಷ ಸಂಘಟನೆಗೆ ಕೊಡುಗೆ ನೀಡಿದ್ದಾರೆ. ಆ ಮೂಲಕ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತಿಚೆಗೆ ಬದಲಾದ ರಾಜಕೀಯ ಬೆಳವಣಿಗೆಯಿಂದ ಸಿ.ನಾಗೇಗೌಡ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಕದಲೂರು ರಾಮಕೃಷ್ಣ ಅವರನ್ನು ಕೆಪಿಸಿಸಿ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗುರುಚರಣ್ ಅವರಿಗೆ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಿ.ನಾಗೇಗೌಡ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಪರಿಣಾಮ ರಾಮಕೃಷ್ಣ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಗುರುಚರಣ್ ಅವರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಿಗಮವೊಂದಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಟಿಕೆಟ್ ಕೈ ತಪ್ಪಿದ ಒಂದೇ ಕಾರಣಕ್ಕೆ ಪಕ್ಷದಿಂದ ಹೊರ ನಡೆದಿರುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಮಾತನಾಡಿ, ಕದಲೂರು ರಾಮಕೃಷ್ಣ ಅವರಿಗೆ ಸಾಕಷ್ಟು ರಾಜಕೀಯ ಅನುಭವಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ರಾಯ್ಕೆಯಾಗಿರುವುದು ಸಂತೋಷದ ವಿಚಾರ ಎಂದರು.
ಕಾಂಗ್ರೆಸ್‌ನ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡರಾದ ಗೋಪಿ, ಲೋಕೇಶ್, ಅವಿನಾಶ್ ಇದ್ದರು.