ಜಿಲ್ಲೆ

ಕದಲೂರು ಉದಯ್ ಅಭಿಮಾನಿ ಬಳಗದ ಘಟಕ ಉದ್ಘಾಟನಾ

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಕದಲೂರು ಉದಯ್ ಅಭಿಮಾನಿಗಳ ಬಳಗದ ಮಹಿಳಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಕದಲೂರು ಉದಯ್ ಅಭಿಮಾನಿ ಬಳಗದ ಕರಡಕೆರೆ ಮಹಿಳಾ ಘಟಕ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದರು.

ಸಮೀಪದ ಕರಡಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೆ.ಶೆಟ್ಟಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಕದಲೂರು ಉದಯ್ ಅಭಿಮಾನಿಗಳ ಬಳಗದ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಉದಯ್ ಅವರ ಸಮಾಜ ಸೇವೆಯನ್ನು ಪ್ರತಿ ಹಳ್ಳಿಗೂ ಪರಿಚಯಿಸಿ ಇನ್ನಷ್ಟು ಮಹಿಳಾ ಘಟಕಗಳನ್ನು ಸ್ಥಾಪಿಸುತ್ತೇವೆ ಎಂದರು. ಅಧಿಕಾರ ಇಲ್ಲದೆ ಉದಯ್ ಅವರು ಇಷ್ಟು ಸೇವೆ ಮಾಡುತ್ತಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ಮದ್ದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಗ್ರಾ.ಪಂ. ಮಾಜಿ ಸದಸ್ಯ ಚಿಕ್ಕಹನುಮೇಗೌಡ ಮಾತನಾಡಿ, ಸಮಾಜ ಸೇವಕನ ಹೆಸರಿನಲ್ಲಿ ಅಭಿಮಾನಿಗಳ ಸಂಘ ಸ್ಥಾಪನೆಯಾಗುತ್ತಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.

ಅಭಿಮಾನಿ ಬಳಗ ಉದ್ಘಾಟಿಸಿದ ಸಮಾಜ ಸೇವಕ, ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ಮಾತನಾಡಿ, ಮದ್ದೂರು ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸದಾ ಸ್ಪಂದಿಸುವೆ ಎಂದರು.

ಬಡವರಿಗೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ, ಹಣವಿಲ್ಲದೆ ತೊಳಲಾಡುತ್ತಿರುವ ರೋಗಿಗಳಿಗೆ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ನೀರಿನ ಬವಣೆ ಇರುವ ಕಡೆ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದೇನೆ. ಒಟ್ಟಾರೆ ಜನೋಪಯೋಗಿ ಕೆಲಸಗಳಿಗೆ ನನ್ನ ಮೊದಲ ಆದ್ಯತೆ ಎಂದರು.

ವಿನುತಾ ಉದಯ್ ಮಾತನಾಡಿ, ಮದ್ದೂರು ಕ್ಷೇತ್ರದ ಜನರ ಸೇವೆಗಾಗಿ ನಾವು ಸದಾ ಸಿದ್ಧ. ನನ್ನ ಪತಿಯೊಂದಿಗೆ ನಿಂತು ಮಹಿಳಾ ಅಭಿಮಾನಿ ಬಳಗದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಯಾವುದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ನಾವು ಸನ್ನದ್ಧರಾಗಿರುತ್ತೇವೆ ಎಂದರು.

ಕಾರ್ಯಕ್ರಮ ಸಂಚಾಲಕ ಕೆ.ಪಿ.ಮನು, ವಿನುತಾ ಉದಯ್, ಸಂಘದ ಅಧ್ಯಕ್ಷ ಕೆ.ಪಿ. ಮಹೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೊಮ್ಮೇಗೌಡ, ಮುಖಂಡರಾದ ಮೊಳ್ಳೆ ನಿಂಗೇಗೌಡ, ನಂದಪ್ಪ, ಶೆಟ್ಟಹಳ್ಳಿ ಸಿದ್ದೇಗೌಡ, ಎಂ.ಶಿವಣ್ಣ, ಶಕುನಿ ಶಂಕರೇಗೌಡ, ಪುಟ್ಟಚನ್ನಮ್ಮ, ಚೌಡಯ್ಯ, ಅಶ್ವಥ್, ಮಹದೇವಮ್ಮ, ಗ್ರಾ.ಪಂ.ಸದಸ್ಯ ಹನುಂತೇಗೌಡ ಇದ್ದರು.