ಜಿಲ್ಲೆ

ಕದಂಬರ ಕಾಲದ ನರಸಿಂಹ ಶಿಲ್ಪ ಪತ್ತೆ

ಶಿಕಾರಿಪುರ: ತಾಲೂಕಿನ ಮಾರವಳ್ಳಿ ಗ್ರಾಮದಲ್ಲಿ ಕದಂಬರ ಕಾಲದ ನರಸಿಂಹ ಶಿಲ್ಪ ದೊರಕಿದೆ. ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ್ ಕ್ಷೇತ್ರಕಾರ್ಯ ಕೈಗೊಂಡಾಗ ಗ್ರಾಮದ ಬೆಟ್ಟದ ಮೇಲೆ ಹುಲಿಸಿದ್ದೇಶ್ವರ ದೇವರು ಎಂದು ಸ್ಥಳೀಯರು ಕರೆಯುವ ನರಸಿಂಹ ಶಿಲ್ಪ ಪತ್ತೆಯಾಗಿದ್ದು ಇದು ಎರಡು ಅಡಿ ಎತ್ತರ, ಒಂದು ಅಡಿ ಅಗಲ ಹಾಗೂ ನಾಲ್ಕು ಅಡಿ ಸುತ್ತಳತೆ ಹೊಂದಿದೆ .

ಈ ಶಿಲ್ಪವನ್ನು ನೋಡಿದರೆ ಭಯ ಸೃಷ್ಟಿಸುವಂತೆ ಕಂಡುಬರುತ್ತದೆ. ಇದು ಮುಂಗಾಲು, ಹಿಂಗಾಲು ಊರಿ ಶಕ್ತಿಯುತವಾಗಿ ಕುಳಿತಿರುವುದು ಕಂಡುಬರುತ್ತದೆ. ಎರಡೆರಡು ಕೊರೆ ಹಲ್ಲು ಹಾಗೂ ಕೆಳ ದವಡೆಯಲ್ಲಿ ಹಲ್ಲು ಹೊಂದಿರುವುದು ಸಷ್ಟವಾಗಿ ಗೋಚರವಾಗುತ್ತದೆ. ಮೀಸೆ ಹೊಂದಿದ್ದು ಕಣ್ಣು ಹಾಗೂ ಮೂಗು ಉಬ್ಬಿದ್ದು ಆಕರ್ಷಣೆಯಿಂದ ಕೂಡಿದೆ. ಮುಂಭಾಗದ ಕಾಲು ಬಿಗಿಯಾಗಿ ಊರಿದ್ದು ಕಾಲು ಬೆರಳು ಹೊಂದಿವೆ.

ಈ ಶಿಲ್ಪಕ್ಕೆ 200 ವರ್ಷಗಳ ಹಿಂದೆ ಸ್ಥಳೀಯವಾಗಿ ಸಿಗುವ ಕಲ್ಲುಗಳಿಂದ ಚಿಕ್ಕ ದೇವಾಲಯ ನಿರ್ಮಾಣ ಮಾಡಿ ಸುತ್ತಲೂ ಸ್ಥಳೀಯವಾದ ಕಾಡುಗಲ್ಲುಗಳಿಂದ ಪೌಳಿ ನಿರ್ಮಾಣ ಮಾಡಿರುವುದು ಕಂಡುಬರುತ್ತದೆ.

ಈ ನರಸಿಂಹ ಶಿಲ್ಪವನ್ನು ಕ್ರಿ.ಶ. 3 ಮತ್ತು 4 ನೇ ಶತಮಾನದ ಕದಂಬರ ಕಾಲದ ಶಿಲ್ಪವೆಂದು ಹೇಳಬಹುದು. ಅಂದರೇ ಮಳವಳ್ಳಿಯ ಶಿವಸ್ಕಂದವರ್ಮನ ಶಾಸನದಲ್ಲಿ ಶ್ರೀ ನರಸಿಂಹ ಶಿಲ್ಪ ದೊರೆತಿರುವ ಸ್ಥಳದಿಂದ ಎರಡು ಕಿಮೀ ಅಂತರದಲ್ಲಿ ಇರುವ ಮತ್ತಿಕೋಟೆಯನ್ನು ‘ಮರಿಯಾಸ’ ಎಂದು ಕರೆಯಲಾಗಿದೆ ಎಂದು ಡಾ. ಜಗದೀಶ ಹಾಗೂ ಸಾಮಕ್ ಅಭಿಪ್ರಾಯಪಟ್ಟಿದ್ದಾರೆ. ಈಗ ಇದನ್ನು ಮತ್ತಿಕಟ್ಟೆ ಎಂದು ಕರೆಯಲಾಗಿದ್ದು, ಈ ಶಿಲ್ಪ ಅದರ ಸಮೀಪವೇ ದೊರೆತಿರುವುದರಿಂದ ಈ ಸ್ಥಳ ಕದಂಬರ ಕಾಲವೆಂದು ತಿಳಿಯಲಾಗಿದೆ.

ಈ ಶಿಲ್ಪನ್ನು ಪತ್ತೆಹಚ್ಚುವಲ್ಲಿ ಗ್ರಾಮಸ್ಥರಾದ ಮಂಜಪ್ಪ ಇತರರು ಹಾಗೂ ಇದರ ಕಾಲ ಗುರುತಿಸುವಲ್ಲಿ ಡಾ. ಜಗದೀಶ್, ಆ. ಸುಂದರ್ ಸಹಕರಿಸಿದ್ದಾರೆ.

ಈ ಬೆಟ್ಟ ಅರಣ್ಯ ಪ್ರದೇಶವಾಗಿದ್ದರಿಂದ ಪಶ್ಚಿಮಘಟ್ಟದಲ್ಲಿ ಹುಲಿಗಳು ಹೆಚ್ಚಾಗಿ ಇರುವುದರಿಂದ ಹುಲಿ ಮುಖದ ನರಸಿಂಹ ಶಿಲ್ಪಗಳ ಆರಾಧನೆ ಕಂಡುಬಂದಿದೆ. ಇದು ಪ್ರಕೃತಿ ದೇವತೆಯ ಸಂರಕ್ಷಣೆ ಹಾಗೂ ಗೋವು ಹಾಗೂ ಮಾನವರ ಸಂರಕ್ಷಣೆಯ ಸಂಕೇತ ಎನ್ನಬಹುದು.

| ಆರ್.ಶೇಜೇಶ್ವರ್, ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ