ಮೈಸೂರು: ಕಥೆಯ ಮೂಲಕ ಇತಿಹಾಸ ಹೇಳಿದರೆ ರುಚಿಸುತ್ತದೆ ಎಂದು ಕಾದಂಬರಿಕಾರ ವಸುಧೇಂದ್ರ ಹೇಳಿದರು.
ಕಲಾ ಸುರುಚಿ ವತಿಯಿಂದ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೇಷ್ಮೆ ಬಟ್ಟೆ’ ಕಾದಂಬರಿ ಬರೆಯಲು 4 ವರ್ಷ ಬೇಕಾಯಿತು. ಬಹಳಷ್ಟು ಅಧ್ಯಯನ ಮಾಡಿದ ನಂತರ ಕೃತಿ ರಚಿಸಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಿ ಓದಬೇಕಾಯಿತು. ಸಾಹಿತ್ಯದ ವಿಸ್ತಾರ ದೊಡ್ಡದು ಎಂದು ಅವರು ಹೇಳಿದರು.
ಈ ಕೃತಿಯನ್ನು ಬರೆಯಬೇಕಾದರೆ ‘ಸಿಲ್ಕ್ ರೂಟ್’ ಹಾದಿಯು ಯಾವ ದೇಶಗಳನ್ನು ಹಾಯ್ದು ಹೋಗಿದೆಯೋ ಆ ಬಗ್ಗೆ ವ್ಯಾಪಕ ಅಧ್ಯಯನ ಮಾಡಿದೆ. ಬೌದ್ಧ ಧರ್ಮ, ತಾವೊ ಧರ್ಮ, ಥೋರಾಷ್ಟ್ರೀಯನ್ ಧರ್ಮಗಳ ಬಗ್ಗೆ ಅಧ್ಯಯನ ಮಾಡಿದೆ. ನಮ್ಮ ಭಾಷೆ, ಆಚರಣೆಯಲ್ಲದ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು ಎಂದರು.
ಏಷ್ಯಾದಿಂದ ಯುರೋಪಿಗೆ ಇದ್ದ ಸಿಲ್ಕ್ ರೂಟ್‌ನಿಂದ 16ನೇ ಶತಮಾನದವರೆಗೆ ಜಗತ್ತಿನಲ್ಲಿ ಆದ ಘಟನೆಗಳನ್ನು ಅತ್ಯಂತ ಸುಂದರವಾಗಿ ಕಣ್ಣಮುಂದೆ ತೆರೆದಿಟ್ಟ ಅವರು, ಜಗತ್ತಿನಲ್ಲಿ ಯಾವಾಗ ಹಡಗಿನ ಆವಿಷ್ಕಾರ ಆಯಿತು.
ಅಂದಿನಿಂದ ಸಿಲ್ಕ್ ರೂಟ್ ಎನ್ನುವುದು ಸಂಪೂರ್ಣವಾಗಿ ಮರೆಯಾಗಿ ಹೋಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಜಗತ್ತಿನಲ್ಲಿ ಈ ಹಿಂದೆ ಸಿಲ್ಕ್ ರೂಟ್ ಇತ್ತು ಎನ್ನುವುದು ಗೊತ್ತಿಲ್ಲದಷ್ಟು ಪ್ರಮಾಣದಲ್ಲಿ ಸಿಲ್ಕ್ ರೂಟ್ ಶಾಶ್ವತವಾಗಿ ಮುಚ್ಚಲ್ಪಟ್ಟಿತು ಎಂದು ವಿವರಿಸಿದರು.
ಸವಾಲಿನ ಕೆಲಸ: ಕಾಲ್ಪನಿಕ ಕಥೆ ಬರೆಯಲು ಮುಖ್ಯವಾಗಿ ಧೈರ್ಯಬೇಕು. ನನ್ನದಲ್ಲದ ಜಗತ್ತನ್ನು ಸೃಷ್ಟಿಸುವುದು ಅಥವಾ ಚಿತ್ರಿಸುವುದು ಸವಾಲಿನ ಕೆಲಸ. ಅದನ್ನು ನಾನು ಈ ಕೃತಿಯಲ್ಲಿ ಮಾಡಿದೆ.
ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಇಂತಹ ಪುಸ್ತಕಗಳ ಮೂಲಕ ಇತಿಹಾಸದ ಬಗ್ಗೆ ಪ್ರೀತಿ ಹುಟ್ಟಿಸಬಹುದು. ಮನೋರಂಜನೆ ಜತೆಗೆ ಇತಿಹಾಸ ತಿಳಿಯುವ ಅವಕಾಶ ಇಲ್ಲಿದೆ. ಇದು ನನ್ನ ಆಶಯ ಕೂಡ ಆಗಿತ್ತು ಎಂದು ವಸುಧೇಂದ್ರ ಹೇಳಿದರು.