ಕೊಳ್ಳೇಗಾಲ: ಕಥೆಗಾರರು ಹೆಚ್ಚಿನ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಪ್ರೊ.ವಿಜಯಕುಮಾರಿ ಕರಿಕಲ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಬುಧವಾರ ಆಯೋಜಿಸಿದ್ದ ದಿಲೀಪ್ ಎನ್ಕೆ ಅವರ ತಿತ್ತಿ ಬ್ವಾಸನ ಟೈಟಾನ್ ವಾಚ್ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಕಥಾ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಪಂಚ ಮಂಗೇಶರಾಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು, ಬಸವರಾಜ ಕಟ್ಟಿಮನಿ, ದೇವನೂರು ಮಹದೇವ, ಲಂಕೇಶ್, ಮೊಗಳ್ಳಿ ಗಣೇಶ್, ಕೃಷ್ಣಮೂರ್ತಿ ಹನೂರು ಮುಂತಾದ ಕಥೆಗಾರರು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ವರ್ತಮಾನದ ಹೊಸ ತಲೆಮಾರಿನ ಕಥೆಗಾರರು ಇಂತಹ ಕಥೆಗಾರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಹಿರಿಯ ಕಥೆಗಾರರು ಹಾಕಿಕೊಟ್ಟ ದಾರಿಯಲ್ಲಿ ದಿಲೀಪ್ ಎನ್ಕೆ ಅವರು ಸಾಗುತ್ತಿದ್ದು, ಅವರ ಕಥೆಗಳಲ್ಲಿ ಪ್ರಾದೇಶಿಕ ಅಸ್ಮಿತೆಯ ಕುರುಹುಗಳನ್ನು ನೋಡಬಹುದಾಗಿದೆ. ಹೊಸ ತಲೆಮಾರಿನ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ ಕಥೆಗಾರರಾಗಿ ದಿಲೀಪ್ ಮುಖ್ಯರಾಗುತ್ತಾರೆ ಎಂದರು.
ಯುವ ಬರಹಗಾರ ಬಸವಣ್ಣ ಮೂಕಹಳ್ಳಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿರುವ ಯುವ ಜನತೆ ಓದುವ ಹವ್ಯಾಸವನ್ನು ದೂರವಾಗಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಹೊಸ ತಲೆಮಾರಿನ ಕಥೆಗಾರರು ಯುವಜನತೆಯನ್ನು ಮುಖ್ಯ ವಾಗಿಸಿಕೊಂಡು ತಮ್ಮದೇ ಆದ ಸಂಯೋಜನೆಯನ್ನು ಕಾಪಾಡಿಕೊಂಡು ಅದನ್ನು ವರ್ತಮಾನದ ವಿಷಯಗಳ ನಡುವೆ ಸಂಯೋಜಿಸಿ ಕಥೆಗಳನ್ನ ರಚಿಸಬೇಕಾಗುತ್ತದೆ ಎಂದರು.
ಸಾಹಿತಿ ಶಂಕನಪುರ ಮಹದೇವ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಲೆಗ್ಸಾಂಡರ್, ಕಥೆಗಾರ ದಿಲೀಪ್ ಎನ್ಕೆ, ಚಾಮರಾಜನಗರ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಕುಮಾರ ಸರಗೂರು, ಪುಸ್ತಕ ಮಳಿಗೆ ಗೋವಿಂದರಾಜು, ಸಿಎಂ ನರಸಿಂಹಮೂರ್ತಿ ಮತ್ತಿತರಿದ್ದರು.