ಜಿಲ್ಲೆ

ಕಥೆಗಾರರಲ್ಲಿ ಪ್ರಯೋಗಶೀಲತೆ ಆಶಾದಾಯಕ -ಸತ್ಯನಾರಾಯಣ -ಕಥಾ ಕಮ್ಮಟ ಕಾರ್ಯಕ್ರಮ

ದಾವಣಗೆರೆ: ಹೊಸ ತಲೆಮಾರಿನ ಕಥೆಗಾರರಲ್ಲಿ ಹಲವು ಪ್ರಯೋಗಶೀಲತೆ ಹೆಚ್ಚಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಚಿಕ್ಕಮಗಳೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಎಸ್.ಸತ್ಯನಾರಾಯಣ ಹೇಳಿದರು.

ವೀರಲೋಕ ಬುಕ್ಸ್ ವತಿಯಿಂದ ನಗರದ ಸಿದ್ಧಗಂಗಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೇಸಿ ಜಗಲಿ ಕಥಾ ಕಮ್ಮಟದ ಎರಡನೇ ದಿನವಾದ ಭಾನುವಾರ, ಕಥೆಯ ವಸ್ತು ಮತ್ತು ವಿನ್ಯಾಸ ಕುರಿತು ಮಾತನಾಡಿದರು.

ವಸ್ತು, ಪಾತ್ರ, ಭಾಷೆ ಮತ್ತು ನಿರೂಪಣೆಯ ಒಟ್ಟು ಮೊತ್ತವೇ ಒಂದು ಉತ್ತಮ ಕಥೆಯಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದ ಶ್ರೇಷ್ಠ ಕಥೆಗಾರರದು ಒಂದೊಂದು ಶೈಲಿ, ವಿನ್ಯಾಸವಿತ್ತು. ಯಾವುದೂ ಅಂತಿಮವಲ್ಲ ಎಂದರು.

ಸಂಕೀರ್ಣ ವಸ್ತುವನ್ನು ಸರಳಗೊಳಿಸಬಾರದು; ಸರಳ ವಸ್ತುವನ್ನು ಸಂಕೀರ್ಣಗೊಳಿಸಬಾರದು ಎಂಬುದು ಲಂಕೇಶರ ಅಭಿಪ್ರಾಯವಾಗಿತ್ತು. ತೇಜಸ್ವಿಯವರು ತಮ್ಮ ಸುತ್ತಲಿನ ಸಣ್ಣ ಸಂಗತಿಗಳನ್ನು ಕಥೆಯನ್ನಾಗಿಸಿ, ಓದುಗರಲ್ಲಿ ಕುತೂಹಲ ಮೂಡಿಸುವಂತೆ ಬರೆಯುತ್ತಿದ್ದರು ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಬಿ.ಎನ್.ಮಲ್ಲೇಶ್, ದಟ್ಟ ಅನುಭವಗಳಿಲ್ಲದೆ ಗಟ್ಟಿ ಕಥೆ ಬರೆಯಲು ಸಾಧ್ಯವಾಗದು. ಬರಹಗಾರರು ತಮ್ಮ ಸುತ್ತಲಿನ ಪರಿಸರವನ್ನು ತೆರೆದ ಮನಸ್ಡಸನಿಂದ ಗಮನಿಸಬೇಕು ಎಂದು ಹೇಳಿದರು.

ಕಥಾ ಪರಂಪರೆಗೆ ಬಹಳ ದೊಡ್ಡ ಇತಿಹಾಸವಿದೆ. ಮಾಸ್ತಿ, ಗೊರೂರು, ಲಂಕೇಶ್ ಇನ್ನು ಅನೇಕ ಹಿರಿಯ ಕಥೆಗಾರರು ಕಥಾ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಕಥಾ ಕಮ್ಮಟಗಳು ಅಕ್ಷರಗಳನ್ನು ಮುರಿದು ಕಟ್ಟುವುದಲ್ಲ, ಕಟ್ಟಿ ಮುರಿಯುವುದು ಹೇಗೆ ಎಂಬುದನ್ನು ಹೇಳಿಕೊಡುತ್ತವೆ ಎಂದರು.

ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ ದಾವಣಗೆರೆಯಲ್ಲಿ 90ರ ದಶಕದವರೆಗೆ ಸಾಹಿತ್ಯ, ರಂಗಭೂಮಿ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಇತ್ತೀಚೆಗೆ ಸಂಘಟನೆ ಕೊರತೆಯಿಂದಾಗಿ ನಿಷ್ಕ್ರಿಯವಾಗುತ್ತಿವೆ. ಇಂತಹ ಕಮ್ಮಟದ ಮೂಲಕ ಹೊಸ ಉತ್ಸಾಹ ಮೂಡಲಿ ಎಂದರು.

ಕಥೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬದ ಕೊಂಡಿಗಳು. ಅವು ಎಂದಿಗೂ ನಮ್ಮನ್ನು ಅಂಟಿಕೊಂಡೇ ಇರುತ್ತವೆ. ಆದರೆ ನಾವು ಕಥೆಗಾರರಾಗಿ ಅದರ ಒಳಹುಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಥೆ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ಕಥೆಗಾರರಾದ ಸದಾಶಿವ ಸೊರಟೂರು, ಎಚ್.ಬಿ.ಇಂದ್ರಕುಮಾರ್, ಫೈಜ್ನಟರಾಜ್, ಪಾಪುಗುರು, ನಾಗರಾಜ ಸಿರಿಗೆರೆ ಇದ್ದರು. ನಾನು ಮೆಚ್ಚಿದ ಕಥೆ ಕುರಿತು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಯಿತು.

---